ಸಿಂಧು, ಕಶ್ಯಪ್ ಪ್ರಿ-ಕ್ವಾರ್ಟರ್ ಫೈನಲ್‌ಗೆ: ಎಚ್.ಎಸ್.ಪ್ರಣಯ್ ಟೂರ್ನಿಯಿಂದ ಹೊರಕ್ಕೆ

Update: 2017-09-13 18:32 GMT

ಸಿಯೊಲ್, ಸೆ.13: ಕೊರಿಯಾ ಸೂಪರ್ ಸರಣಿಯಲ್ಲಿ ಭಾರತದ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಪಾರುಪಲ್ಲಿ ಕಶ್ಯಪ್ ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿ ದೇಶಕ್ಕೆ ಹೆಮ್ಮೆ ತಂದಿರುವ ಸಿಂಧು ಬುಧವಾರ ಕೇವಲ 29 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಹಾಂಕಾಂಗ್‌ನ ಗಾನ್ ಯೀ ಚೆಯುಂಗ್‌ರನ್ನು 21-13, 21-8 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.

ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಕಶ್ಯಪ್ ಚೈನೀಸ್ ತೈಪೆಯ ಸು ಜೆನ್ ಹಾವೊರನ್ನು 21-13, 21-16 ಗೇಮ್‌ಗಳಿಂದ ಮಣಿಸುವ ಮೂಲಕ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಸುಮಾರು ಒಂದು ಗಂಟೆ ಕಾಲ ನಡೆದ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸಮೀರ್ ವರ್ಮ ಥಾಯ್ಲೆಂಡ್‌ನತನೊಂಗ್‌ಸಕ್‌ರನ್ನು 21-13, 21-23, 21-9 ಅಂತರದಿಂದ ಮಣಿಸಿ ಗಮನ ಸೆಳೆದರು.

 ಇದೇ ವೇಳೆ, ಎಚ್.ಎಸ್.ಪ್ರಣಯ್ ಹಾಗೂ ಸೌರಭ್ ವರ್ಮ ಸವಾಲು ಅಂತ್ಯ ಗೊಂಡಿದೆ.

ಸೌರಭ್ ಜಪಾನ್‌ನ ಕೆಂಟಾ ನಿಶಿಮೊಟೊ ವಿರುದ್ಧ 21-18, 13-21, 19-21 ಅಂತರದಿಂದ ಶರಣಾದರು.

ವಿಶ್ವದ ನಂ.9ನೆ ಆಟಗಾರ ಕಾ ಲಾಂಗ್ ಆ್ಯಂಗಸ್ ವಿರುದ್ಧ 64 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಎಚ್.ಎಸ್.ಪ್ರಣಯ್ 17-21, 23-21, 14-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮಲೇಷ್ಯಾದ ಖಿಮ್ ವ್ಹಾ ಲಿಮ್ ಹಾಗೂ ಲಿನ್ ಚಿಯಾ ಯುರನ್ನು 50 ನಿಮಿಷಗಳ ಹೋರಾಟದಲ್ಲಿ 21-9, 22-24, 21-12 ಗೇಮ್‌ಗಳ ಅಂತರದಲ್ಲಿ ಸೋಲಿಸಿದರು.

ಕೊರಿಯಾದ ಚುಂಗ್ ಇಯು ಸಿಯೊಕ್ ಹಾಗೂ ಕಿಮ್ ಡುಕ್ ಯಂಗ್ ವಿರುದ್ಧ 11-21, 10-21 ಗೇಮ್‌ಗಳಿಂದ ಸೋತಿರುವ ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ ಪುರುಷರ ಡಬಲ್ಸ್ ಸ್ಪರ್ಧೆಯಿಂದ ಹೊರ ನಡೆದಿದ್ದಾರೆ.

 ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್‌ರಾಜ್ ಟಾಂಗ್ ಚುನ್ ಮಾನ್ ಹಾಗೂ ಸೆ ಯಿಂಗ್ ಸುಯೆಟ್ ವಿರುದ್ಧ 18-21, 19-21 ರಿಂದ ಸೋಲುವ ಮೂಲಕ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News