ಫಡ್ನವೀಸ್ ಸರಕಾರದ ಆಡಳಿತಾವಧಿಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಆತ್ಮಹತ್ಯೆಗೆ ಶರಣು: ಬಿಜೆಪಿ ಸಂಸದ ನಾನಾ ಪಟೋಲೆ

Update: 2017-09-14 11:21 GMT

ಮುಂಬೈ, ಸೆ.14: ಬಿಜೆಪಿ ಸಂಸದ ನಾನಾ ಪಟೋಲೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತಮ್ಮದೇ ಸರಕಾರ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ರೈತರ ಹಾಗೂ ಸಾಲ ಮನ್ನಾ ವಿಚಾರದಲ್ಲಿ ಅವರು ಕೆಂಡ ಕಾರಿದ್ದಾರೆ. ಹಿಂದಿನ ಕಾಂಗ್ರೆಸ್-ಎನ್‌ಸಿಪಿ ಸರಕಾರದ ಅವಧಿಗೆ ಹೋಲಿಸಿದಾಗ ಈಗಿನ ಸರಕಾರದಡಿಯಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಬಿಜೆಪಿ ಸಂಸದ ಹೇಳಿದ್ದಾರೆ. ಕೃಷಿ ಸಾಲ ಮನ್ನಾ ಮಾಡಲು ಆನ್ಲೈನ್ ಅರ್ಜಿಗಳನ್ನು ವಿರೋಧಿಸಿದ ಅವರು ಅದೇ ಸಮಯ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದೂ ಹೇಳಿದ್ದಾರೆ.

ರೈತರಿಗೆ ಅನ್ಯಾಯವಾಗುತ್ತಿದ್ದರೆ ತಾನು ಸುಮ್ಮನಿರುವುದಿಲ್ಲ ಎಂದ ಪಟೋಲೆ, ತಾನು ಬಿಜೆಪಿ ವಿರುದ್ಧ ಏನನ್ನೂ ಹೇಳುತ್ತಿಲ್ಲ. ಬದಲಾಗಿ ಸರಕಾರದ ಮತ್ತು ಆಡಳಿತದ ಲೋಪದೋಷಗಳನ್ನು ಎತ್ತಿ ತೋರಿಸುತ್ತಿರುವುದಾಗಿ ತಿಳಿಸಿದರು.

‘‘ಮುಖ್ಯಮಂತ್ರಿ ನನ್ನ ಸ್ನೇಹಿತ. ಅವರೇನಾದರೂ ತಪ್ಪು ಮಾಡುತ್ತಿದ್ದರೆ ಅದನ್ನು ಎತ್ತಿ ತೋರಿಸುವುದು ನನ್ನ ಕರ್ತವ್ಯ. ಅವರು ತಮ್ಮ ತಪ್ಪುಗಳನ್ನು ತಿದ್ದಿ ಜನರ ಕಲ್ಯಾಣಕ್ಕಾಗಿ ಶ್ರಮಿಸಬೇಕೆಂಬುದು ನನ್ನ ಆಸೆ’’ ಎಂದು ಪಟೋಲೆ ಹೇಳಿದರು.

ಯಾರಾದರೂ ಪ್ರಶ್ನೆ ಕೇಳುವುದು ಪ್ರಧಾನಿಗೆ ಇಷ್ಟವಾಗುವುದಿಲ್ಲ ಎಂದು ಹೇಳುವ ಮೂಲಕ ಇತ್ತೀಚೆಗೆ ಪಟೋಲೆ ಸುದ್ದಿಯಾಗಿದ್ದರು. ಭಂಡಾರ-ಗೊಂಡಿಯ ಸಂಸದರಾಗಿರುವ ಪಟೋಲೆ ತಮಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಭೇಟಿ ಮಾಡಲು ಅವಕಾಶ ದೊರೆತಲ್ಲಿ ರೈತರ ಪರಿಸ್ಥಿತಿ ಬಗ್ಗೆ ಅವರಿಗೆ ವಿವರಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News