×
Ad

18 ಸಾವಿರ ಕನಿಷ್ಠ ವೇತನಕ್ಕಾಗಿ, ಗುತ್ತಿಗೆ ಪದ್ಧತಿ ರದ್ದು ಮಾಡಲು ಆಗ್ರಹಿಸಿ ಕಾರ್ಮಿಕರ ಧರಣಿ

Update: 2017-09-14 19:20 IST

ಬೆಂಗಳೂರು, ಸೆ.14: ಕನಿಷ್ಠ ವೇತನ 18 ಸಾವಿರ ನೀಡಬೇಕು, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಹಾಗೂ ಗುತ್ತಿಗೆ ಪದ್ಧತಿ ರದ್ದು ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ವರ್ಗಗಳ ಸಾವಿರಾರು ಕಾರ್ಮಿಕರು ನಗರದಲ್ಲಿಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ನೇತೃತ್ವದಲ್ಲಿ ಸಣ್ಣ, ಮಧ್ಯಮ ಹಾಗೂ ಸಾರ್ವಜನಿಕ ಕೈಗಾರಿಕೆಗಳಲ್ಲಿ, ಮೆಡಿಕಲ್, ಗುತ್ತಿಗೆ ಕಾರ್ಮಿಕರು, ಅಸಂಘಟಿತ ವಲಯ ಕಾರ್ಮಿಕರು, ಪೌರ ಕಾರ್ಮಿಕರು, ಗ್ರಾಮ ಪಂಚಾಯತ್ ನೌಕರರು, ಅಂಗನವಾಡಿ, ಆಶಾ, ಬಿಸಿಯೂಟ, ಹಾಸ್ಟೆಲ್ ನೌಕರರು ಸೇರಿದಂತೆ 175 ವಲಯಗಳ 20 ಸಾವಿರಕ್ಕೂ ಅಧಿಕ ಕಾರ್ಮಿಕರು ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೂ ಬೃಹತ್ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, ರಾಜ್ಯಾದ್ಯಂತ ಅಸಂಘಟಿತ ಮತ್ತು ವಿವಿಧ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಅತ್ಯಂತ ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ದಿನಕ್ಕೆ 2 ಸಾವಿರ ರೂ.ಗಳಷ್ಟು ಸಂಪತ್ತನ್ನು ಸೃಷ್ಟಿಸುವ ಕೆಲಸಕ್ಕೆ ಕೇವಲ 250ರಿಂದ 350ರೂ. ಪಡೆಯುತ್ತಿದ್ದಾರೆ. 7ನೆ ವೇತನ ಆಯೋಗ ದಿನಕ್ಕೆ 700 ರೂ.ಕನಿಷ್ಠ ವೇತನ ನಿಗದಿ ಮಾಡಬೇಕೆಂಬ ಶಿಫಾರಸು ಮಾಡಿ 2 ವರ್ಷವಾದರೂ ಸರಕಾರ ಆ ವೇತನವನ್ನು ನಿಗದಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಎನ್‌ಡಿಎ ನೇತೃತ್ವದ ಸರಕಾರ ಈಗಾಗಲೇ ಜಾರಿಯಲ್ಲಿರುವ 44 ಕಾರ್ಮಿಕ ಕಾನೂನುಗಳನ್ನು ಮೊಟಕುಗೊಳಿಸಿ ಮೂರು ಕೋಡ್‌ಗಳನ್ನಾಗಿ ರೂಪಿಸಲಾಗುತ್ತಿದೆ. ಇತ್ತೀಚಿಗೆ ಸಾಮಾಜಿಕ ಭದ್ರತಾ ಸಂಹಿತೆ ಸಾರ್ವಜನಿಕ ಚರ್ಚೆಗಾಗಿ ಪ್ರಕಟಿಸಲಾಗಿದೆ. ಆದರೆ, ಫ್ಯಾಕ್ಟರಿ ಕಾಯ್ದೆಗೆ ತಿದ್ದುಪಡಿ ತಂದು 40 ಕಾರ್ಮಿಕರಿಗಿಂತ ಕಡಿಮೆ ಇರುವ ಫ್ಯಾಕ್ಟರಿಗಳನ್ನು ಕಾರ್ಖಾನೆ ಕಾನೂನುಗಳಿಂದ ವಿನಾಯಿತಿ ನೀಡಲಾಗಿದೆ. ಈ ಮೂಲಕ ಶೇ.72 ರಷ್ಟು ಕಾರ್ಮಿಕರು ಕಾನೂನಿನಿಂದ ಹೊರಗುಳಿಯಲಿದ್ದು, ದೊಡ್ಡ ಸಂಖ್ಯೆಯ ಕಾರ್ಮಿಕರನ್ನು ಸಾಮಾಜಿಕ ಭದ್ರತೆ ಕಾನೂನಿನಿಂದ ಹೊರಗಿಡಲು ಮೋದಿ ಸರಕಾರ ಮುಂದಾಗಿದೆ ಎಂದು ಆರೋಪಿಸಿದರು.

ಸಿಪಿಎಂ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಗೋವುಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಆದರೆ, ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಕನಿಷ್ಠ ಕೂಲಿ ನೀಡಲು ಕಾನೂನು ರೂಪಿಸಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಮಿಕರಿಗೆ ಚುನಾವಣಾ ವೇಳೆ ನೀಡಿದ ಯಾವುದೇ ಭರವಸೆಗಳನ್ನು ಇದುವರೆಗೂ ಈಡೇರಿಸಲು ಮುಂದಾಗಿಲ್ಲ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಪಂಚೇಂದ್ರಿಯಗಳನ್ನು ಕಳೆದುಕೊಂಡಿದ್ದು, ಮತಗಳು ಕೇಳುವಾಗ ಮಾತ್ರ ಎಲ್ಲರೂ ನೆನಪಾಗುತ್ತಾರೆ. ಹೀಗಾಗಿ, ದುಡಿಯುವ ವರ್ಗ ಸರಕಾರಗಳ ಜನವಿರೋಧಿ ನೀತಿಗಳನ್ನು ಹಾಗೂ ರಾಜಕಾರಣಿಗಳ ರಾಜಕೀಯವನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಬೇಡಿಕೆಗಳು ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಲ್ಲ ಪಕ್ಷಗಳನ್ನು ಪ್ರಶ್ನಿಸಬೇಕು ಎಂದು ಕರೆ ನೀಡಿದರು.

ಸಿಐಟಿಯು ಕಾರ್ಯದರ್ಶಿ ಕೆ.ಎನ್.ಉಮೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದು ಹಮಾಲಿ, ಮನೆಕೆಲಸ, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಹಲವರಿಗೆ ಸ್ಮಾರ್ಟ್‌ಕಾರ್ಡ್ ಒಳಗೊಂಡ ಪಿಂಚಣಿ ಯೋಜನೆ ಇದುವರೆಗೂ ಜಾರಿಯಾಗಿಲ್ಲ. ರಾಜ್ಯದ ಉದ್ಯಮಗಳಲ್ಲಿ ಹಾಗೂ ರಾಜ್ಯ ಸರಕಾರದ ಹತ್ತಾರು ಇಲಾಖೆಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ವ್ಯಾಪಕವಾಗಿದೆ. ಇದು ಕಾರ್ಮಿಕರ ದಿನನಿತ್ಯದ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಅಲ್ಲದೆ, ಕಾರ್ಮಿಕರಿಗೆ ಗುತ್ತಿಗೆದಾರ ಏಜೆನ್ಸಿಗಳು ನ್ಯಾಯಯುತವಾಗಿ ನೀಡಬೇಕಾದ ವೇತನ ನೀಡುತ್ತಿಲ್ಲ. ಸಾಮಾಜಿಕ ಭದ್ರತೆಯಿಂದ ಹೊರಗಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಲವಾರು ಬಾರಿ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಕಾರ್ಮಿಕ ಸಚಿವರು ಮಾಲಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಕೂಡಲೇ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.

ಭದ್ರತೆ ವ್ಯವಸ್ಥೆ: ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರಿಂದ ನಗರದ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವನದವರೆಗೆ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಒಂದು ಸಾವಿರ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿತ್ತು. ಸ್ವಾತಂತ್ರ ಉದ್ಯಾನವನದ ಸುತ್ತಮುತ್ತ ರಸ್ತೆಗಳಲ್ಲಿಯೂ ಕಾರ್ಮಿಕರು ಸೇರಿದ್ದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಆದರೂ, ರೇಸ್‌ಕೋಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಏರ್ಪಟ್ಟಿತ್ತು.

ಧರಣಿಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಸೈಯದ್ ಮುಜಾಯೀದ್, ಕೆ.ಪ್ರಕಾಶ್, ಸುನಾಂದಾ, ಮಾಲಿನಿ ಮೇಸ್ತಾ, ವಸಂತ ಆಚಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬೇಡಿಕೆಗಳು: 

-ರಾಜ್ಯವ್ಯಾಪಿ ಕನಿಷ್ಠ 18 ಸಾವಿರ ವೇತನ ನೀಡಬೇಕು.
-ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.
-ಬೆಲೆ ಏರಿಕೆ ನಿಯಂತ್ರಣ ಮತ್ತು ಸಾರ್ವಜನಿಕ ಪಡಿತರ ವ್ಯವಸ್ಥೆ ಜಾರಿ ಮಾಡಬೇಕು.
-ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ನಿಲ್ಲಿಸಬೇಕು.
-ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಾಡುವುದು ನಿಲ್ಲಿಸಬೇಕು.
-ಕಾರ್ಮಿಕ ಸಂಘದ ಕಡ್ಡಾಯ ಮಾನ್ಯತೆಗೆ ಶಾಸನ ರೂಪಿಸಬೇಕು.
-ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು.
-ಎಲ್ಲ ಜಿಲ್ಲೆಗಳಲ್ಲೂ ಕಾರ್ಮಿಕ ನ್ಯಾಯಾಲಯ ಸ್ಥಾಪಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News