×
Ad

ಮಾಧ್ಯಮಗಳ ವರದಿಯಿಂದ ಮನಸ್ಸಿಗೆ ನೋವಾಗಿದೆ: ಇಂದ್ರಜಿತ್ ಲಂಕೇಶ್

Update: 2017-09-14 19:30 IST

ಬೆಂಗಳೂರು, ಸೆ.14: "ನನ್ನ ಹಿರಿಯ ಸಹೋದರಿ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸುತ್ತಿರುವ ವಿಚಾರಣೆಗೆ ನಾನು ಸಹಕಾರ ನೀಡುತ್ತಿಲ್ಲ, ಯಾವುದೇ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ನೀಡುತ್ತಿಲ್ಲವೆಂದು ಕೆಲವು ಮಾಧ್ಯಮಗಳು ಬಿಂಬಿಸುತ್ತಿರುವುದರಿಂದ ಮನಸ್ಸಿಗೆ ನೋವಾಗಿದೆ" ಎಂದು ಚಲನಚಿತ್ರ ನಿರ್ದೇಶಕ ಇಂದ್ರಜಿತ್‌ ಲಂಕೇಶ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಒಬ್ಬ ಪತ್ರಕರ್ತ, ಒಂದು ಪತ್ರಿಕೆಯನ್ನು ನಡೆಸುತ್ತಿದ್ದೇನೆ. ಪತ್ರಕರ್ತರು ವೃತ್ತಿ ಬದುಕಿನಲ್ಲಿ ಎದುರಿಸುವ ಕಷ್ಟ ನನಗೆ ಅರ್ಥವಾಗುತ್ತದೆ. ಆದರೆ, ಆಧಾರ ರಹಿತವಾದ ವರದಿಗಳು ಪ್ರಕಟಿಸುವುದು ಎಷ್ಟರಮಟ್ಟಿಗೆ ಸರಿ" ಎಂದು ಪ್ರಶ್ನಿಸಿದರು.

"ಎಸ್‌ಐಟಿಯವರು ನಡೆಸುತ್ತಿರುವ ತನಿಖೆ ವೇಳೆ ನಾನು ಗಳಗಳನೆ ಅತ್ತಿದ್ದೇನೆ, ಅವರ ಪ್ರಶ್ನೆಗಳಿಗೆ ಉತ್ತರಿಸದೆ ಕುಸಿದು ಬಿದ್ದಿದ್ದೇನೆ ಎಂದು ಪ್ರಕಟಿಸುತ್ತಿರುವ ವರದಿಗಳನ್ನು ನೋಡಿ ಮನಸ್ಸಿಗೆ ತುಂಬಾ ಬೇಜಾರಾಗಿದೆ. ನಮ್ಮ ಅಕ್ಕನನ್ನು ಕಳೆದುಕೊಂಡ ನೋವಿನಲ್ಲಿ ನಾವಿದ್ದೇವೆ. ಆದರೆ, ಈ ರೀತಿಯ ವರದಿಗಳ ಬಗ್ಗೆ ಸ್ಪಷ್ಟೀಕರಣ ನೀಡಲೇಬೇಕಿದೆ" ಎಂದು ಹೇಳಿದರು.

"ನನ್ನ ಅಕ್ಕನ ಕೊಲೆಯಾಗಿದೆ, ಅದನ್ನು ನಾನು, ನನ್ನ ತಾಯಿ, ಅಕ್ಕ ಸೇರಿದಂತೆ ಎಲ್ಲರೂ ತೀವ್ರವಾಗಿ ಖಂಡಿಸಿದ್ದೇವೆ. ಗೌರಿ ಅಕ್ಕನ ಹತ್ಯೆಗೆ ಕಾರಣಕರ್ತರು ಯಾರು, ಯಾವ ಕಾರಣಕ್ಕಾಗಿ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಕೊಳ್ಳಲು ನಿಮಗೆ ಇರುವಷ್ಟೇ ಆತಂಕ, ಕುತೂಹಲ ನಮಗೂ ಇದೆ" ಎಂದ ಅವರು, "ನಾವು ಎಸ್‌ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಒಂದು ಸಿದ್ಧಾಂತದ ವಿಚಾರವಾಗಿ ನಾನು ಹಾಗೂ ಗೌರಿ ಅಕ್ಕ ಬೇರೆಯಾಗಿದ್ದೆವು. ಈ ಸಂಬಂಧ ನಾವಿಬ್ಬರೂ ಪರಸ್ಪರ ಒಬ್ಬರ ವಿರುದ್ಧ ಒಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಆನಂತರ, ಇಬ್ಬರೂ ಕೂತು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದೇವೆ" ಎಂದರು.

"ಆ ಪ್ರಕರಣವಾಗಿ ಸುಮಾರು 14-15 ವರ್ಷವಾಗಿದೆ. ಈ ಅವಧಿಯಲ್ಲಿ ನನ್ನ ವಿರುದ್ಧ ಅವರಾಗಲಿ, ಅವರ ವಿರುದ್ಧ ನಾನಾಗಲಿ ಎಂದಿಗೂ ಮಾತನಾಡಿಲ್ಲ. ಒಂದು ಕುಟುಂಬವಾಗಿ ಹೇಗೆ ಅನ್ಯೋನ್ಯವಾಗಿರಬೇಕು, ನಾವು ಹಾಗೆ ಇದ್ದೆವು. ಹಬ್ಬ ಹರಿದಿನಗಳನ್ನು ಎಲ್ಲರೂ ಒಟ್ಟಾಗಿ ಸೇರಿ ಆಚರಿಸಿದ್ದೇವೆ" ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News