×
Ad

ಲಿಂಗಾಯತ ಸ್ವತಂತ್ರ ಧರ್ಮದ ವಿಚಾರ: ತಜ್ಞರ ಸಮಿತಿ ರಚನೆಗೆ ಬಸವರಾಜರಾಯರೆಡ್ಡಿ ಸಲಹೆ

Update: 2017-09-14 20:01 IST

ಬೆಂಗಳೂರು, ಸೆ.14: ಲಿಂಗಾಯತ ಸ್ವತಂತ್ರ ಧರ್ಮ ಯಾವ ರೀತಿ ಇರಬೇಕು ಎಂಬುದನ್ನು ನಾವು ಮೊದಲು ನಿರ್ಧರಿಸಿಕೊಳ್ಳಬೇಕು. ಇದಕ್ಕಾಗಿ ಸ್ವಾಮೀಜಿಗಳು, ಕಾನೂನು ತಜ್ಞರನ್ನು ಒಳಗೊಂಡ 15 ಜನರ ಸಮಿತಿಯನ್ನು ರಚಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ ಸಲಹೆ ನೀಡಿದ್ದಾರೆ.

ಗುರುವಾರ ವಿಧಾನಸೌದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ ಸ್ಥಾಪನೆಯ ವಿಷಯದಲ್ಲಿ ಸರಕಾರದ ಪಾತ್ರವೇನೂ ಇಲ್ಲ.ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಸಂದರ್ದಲ್ಲಿ ಮಾತ್ರ ಸರಕಾರ ಮಧ್ಯ ಪ್ರವೇಶ ಅಗತ್ಯವಿದೆ ಎಂದರು. 

ವೀರಶೈವರು ಹಿಂದೂಗಳು. ಅವರು ಲಿಂಗಾಯತರೊಂದಿಗೆ ಸೇರಿಕೊಂಡರೆ ಪ್ರತ್ಯೇಕ ಧರ್ಮದ ಮಾನ್ಯತೆ ಪಡೆಯಲು ಕಾನೂನು ತೊಡಕು ಎದುರಾಗುತ್ತದೆ. ಹೀಗಾಗಿ ವೀರಶೈವ ಬದಲಾಗಿ ‘ವೀರ ಲಿಂಗಾಯತ’ ಎಂದು ಹೆಸರು ಬದಲಾವಣೆ ಮಾಡಿಕೊಂಡರೆ ಸ್ವಾಗತ ಎಂದು ಅವರು ಹೇಳಿದರು.

ಶೈವ ಎಂಬ ಪದ ಹಿಂದೂ ಧರ್ಮದಲ್ಲಿದೆ. ಋಗ್ವೇದ ಉಪನಿಷತ್‌ಗಳಲ್ಲಿಯೂ ಈ ಪದದ ಉಲ್ಲೇಖವಿದೆ. ಶೈವರು ಎಂದರೆ ವೈಷ್ಣವರು ಎಂದು ಪರಿಗಣಿಸಲಾಗುತ್ತದೆ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಸಿಗುವ ಸಂದರ್ಭದಲ್ಲಿ ವೀರಶೈವರನ್ನೊಳಗೊಂಡಿದ್ದರೆ ನ್ಯಾಯಾಲಯದಲ್ಲಿ ಇದು ಪ್ರಶ್ನಾರ್ಹವಾಗುವ ಸಾಧ್ಯತೆಗಳಿವೆ. ಹಾಗಾಗಿ ವೀರಶೈವರ ಬದಲಾಗಿ ವೀರಲಿಂಗಾಯತ ಎಂದು ಬಳಕೆ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.

ಹಿಂದೂ ಧರ್ಮದಲ್ಲಿ ವರ್ಣಭೇದ ನೀತಿಗಳಿವೆ, ಸಮಾನತೆ ಇಲ್ಲ. ಸ್ತ್ರೀಯರಿಗೆ ಮಾನ್ಯತೆ ಇಲ್ಲ. ಶರಣ ಸಂಪುಟದಲ್ಲಿ ಇದೆಲ್ಲವೂ ಸಾಧ್ಯವಿದೆ. ಲಿಂಗಾಯತ ಧರ್ಮದಲ್ಲಿ ಪೂಜೆ ಮಾಡುವಂತಿಲ್ಲ. ಅಂಧ ಶ್ರದ್ಧೆ, ಮೂಢನಂಬಿಕೆಗೆ ಅವಕಾಶವಿಲ್ಲ. ವೈಚಾರಿಕ ನೆಲೆಗಟ್ಟಿನಲ್ಲಿ ಲಿಂಗಾಯತ ಧರ್ಮ ಸ್ಥಾಪನೆಯಾಗಬೇಕು. ಅದಕ್ಕಾಗಿ ತಜ್ಞರ ಸಮಿತಿಯನ್ನು ರಚಿಸಿ ಆ ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ ಧರ್ಮವನ್ನು ಪುನರುಜ್ಜೀವನಗೊಳಿಸಬೇಕು ಎಂದು ಸಲಹೆ ನೀಡಿದರು.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಸಿದ್ಧಗಂಗಾ ಶ್ರೀಗಳ ವಿಷಯದಲ್ಲಿ ಸುಳ್ಳು ಹೇಳಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ಸಿದ್ದಗಂಗಾ ಶ್ರೀಗಳ ಹೇಳಿಕೆಯು ಸುಳ್ಳು ಎಂದು ನಾನು ಪ್ರತಿಪಾದಿಸುವುದಿಲ್ಲ. ಈ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮಾತ್ರ ಒಳ್ಳೆಯದಲ್ಲ ಎಂದು ಬಸವರಾಜರಾಯರೆಡ್ಡಿ ಹೇಳಿದರು.

ಎಂ.ಬಿ.ಪಾಟೀಲ್ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಗೊಂದಲಗಳನ್ನು ಬಗೆಹರಿಸಿಕೊಳ್ಳುವುದು ಸೂಕ್ತ. ಶೀಘ್ರದಲ್ಲೇ ನಾನು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಬಸವರಾಜರಾಯರೆಡ್ಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News