ಸಿದ್ದಗಂಗಾ ಶ್ರೀ ಹೇಳಿಕೆಯೇ ಅಂತಿಮ: ಈಶ್ವರ ಖಂಡ್ರೆ
ಬೆಂಗಳೂರು, ಸೆ.14: ವೀರಶೈವ ಹಾಗೂ ಲಿಂಗಾಯತ ವಿಷಯದಲ್ಲಿ ತುಮಕೂರಿನ ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರಸ್ವಾಮೀಜಿ ನೀಡಿರುವ ಹೇಳಿಕೆಯೆ ಅಂತಿಮವಾದದ್ದು, ಸಮುದಾಯದ ಪ್ರತಿಯೊಬ್ಬರೂ ಅದಕ್ಕೆ ತಲೆಬಾಗಬೇಕು ಎಂದು ಪೌರಾಡಳಿತ ಸಚಿವ ಈಶ್ವರಖಂಡ್ರೆ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿವಾದದಲ್ಲಿ ಸಿದ್ದಗಂಗಾ ಶ್ರೀಗಳನ್ನು ಅನಗತ್ಯವಾಗಿ ಎಳೆದು ತರುವುದು ಮಹಾ ಅಪರಾಧ. ನಡೆದಾಡುವ ದೇವರು ಎಂದು ಕರೆಸಲ್ಪಡುವವರ ಹೆಸರಿನಲ್ಲಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದರು.
ಸಿದ್ದಗಂಗಾ ಶ್ರೀಗಳು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೀಮಿತರಲ್ಲ. ಎಲ್ಲ ಜಾತಿ, ಧರ್ಮಗಳ ಅನುಯಾಯಿಗಳ ಗೌರವಕ್ಕೆ ಪಾತ್ರವಾಗಿದ್ದಾರೆ. ಸಚಿವ ಎಂ.ಬಿ.ಪಾಟೀಲ್ ಹಾಗೂ ಬಸವಧರ್ಮ ಪೀಠದ ಮಾತೆ ಮಹಾದೇವಿ ನೀಡಿರುವ ಹೇಳಿಕೆಗಳ ಕುರಿತು ನಿನ್ನೆ ನಡೆದ ವೀರಶೈವ ಲಿಂಗಾಯತ ಒಕ್ಕೂಟದ ಜಂಟಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.
ವೀರಶೈವ ಲಿಂಗಾಯತ ವಿಚಾರದಲ್ಲಿ ಸಮುದಾಯದ ಯಾರೊಬ್ಬರೂ ವೈಯಕ್ತಿಕ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡಬಾರದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದಾಗಿ ಮುನ್ನಡೆಯಬೇಕೆಂದು ನಿರ್ಧರಿಸಲಾಗಿದೆ. ಇದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆಂಬ ವಿಶ್ವಾಸವಿದೆ ಎಂದು ಈಶ್ವರಖಂಡ್ರೆ ತಿಳಿಸಿದರು.
ವೀರಶೈವ ಹಾಗೂ ಲಿಂಗಾಯತ ಎರಡು ಒಂದೇ ಎಂಬುದು ನಮ್ಮ ಅಭಿಪ್ರಾಯ. ಪ್ರತ್ಯೇಕ ಧರ್ಮದ ಬೇಡಿಕೆ ವಿಚಾರದಲ್ಲಿ ಕೇವಲ ಲಿಂಗಾಯತ ಎಂದು ಪ್ರತಿಪಾದಿಸಲಾಗುತ್ತಿದೆ. ಪ್ರತ್ಯೇಕ ಧರ್ಮದ ಬೇಡಿಕೆಯನ್ನು ಮೊದಲು ಪ್ರಸ್ತಾಪ ಮಾಡಿದ್ದೆ ವೀರಶೈವ ಮಹಾಸಭಾ ಎಂದ ಅವರು, ಆದುದರಿಂದ, ಪ್ರತ್ಯೇಕ ಧರ್ಮದ ವಿಚಾರವನ್ನು ಕೇವಲ ‘ಲಿಂಗಾಯತ’ಕಷ್ಟೇ ಸೀಮಿತವಾಗಿ ಹೇಳಿಕೆ ನೀಡುತ್ತಿರುವವರಿಗೆ ಮನವರಿಕೆ ಮಾಡಿಕೊಡಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ ಈಶ್ವರ ಖಂಡ್ರೆ ತಿಳಿಸಿದರು.