ಹಂಪಿ ವಿವಿ ಕುಲಪತಿ ಮಲ್ಲಿಕಾ ಘಂಟಿಗೆ ನೋಟಿಸ್: ಬಸವರಾಜರಾಯರೆಡ್ಡಿ
ಬೆಂಗಳೂರು, ಸೆ.14: ವಿಧಾನಸೌಧದಲ್ಲಿ ವಿಶ್ವವಿದ್ಯಾನಿಲಯದ ಕೆಲಸ ಮಾಡಿಸಿಕೊಳ್ಳಬೇಕಾದರೆ ಸೂಟ್‌ಕೇಸ್ ತುಂಬಾ ಹಣ ತೆಗೆದುಕೊಂಡು ಹೋಗಬೇಕೆಂದು ಹೇಳಿಕೆ ನೀಡಿರುವ ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾಘಂಟಿಗೆ ನೋಟಿಸ್ ನೀಡಿ ಕಠಿಣ ಕ್ರಮ ಜರಗಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾ ಘಂಟಿ ಯಾವ ಕಾರಣಕ್ಕಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ವಿಧಾನಸೌಧಕ್ಕೆ ಯಾರಿಗಾಗಿ ಅವರು ಸೂಟ್‌ಕೇಸ್ ತೆಗೆದುಕೊಂಡು ಬಂದಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕಿತ್ತು ಎಂದರು.
ರಾಜ್ಯ ಸರಕಾರದ ಬಳಿ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಯಾವ ಕೆಲಸಗಳು ಇರುವುದಿಲ್ಲ. ವಿಶ್ವವಿದ್ಯಾನಿಲಯಗಳ ಎಲ್ಲ ಕಾರ್ಯಚಟುವಟಿಕೆಗಳ ಹತೋಟಿಯು ರಾಜ್ಯಪಾಲರ ಬಳಿ ಇರುತ್ತದೆ. ಆದರೂ, ಮಲ್ಲಿಕಾ ಘಂಟಿ ರಾಜ್ಯ ಸರಕಾರದ ವಿರುದ್ಧ ಆರೋಪಿಸಿರುವುದು ಬೇಜವಾಬ್ದಾರಿತನದಿಂದ ಕೂಡಿದೆ. ಈ ಸಂಬಂಧ ಸ್ಪಷ್ಟಣೆ ಕೋರಿ ನೋಟಿಸ್ ನೀಡಿ, ಆನಂತರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ಹಂಪಿ ವಿಶ್ವವಿದ್ಯಾಲಯ ಸಂಶೋಧನೆಗೆ ಹೆಚ್ಚು ಒತ್ತು ನೀಡುತ್ತಿದೆ. ಇತ್ತೀಚೆಗಷ್ಟೇ ವಿವಿಯ ಬೆಳ್ಳಿ ಹಬ್ಬದ ಆಚರಣೆಗೆ 25 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಅದರಲ್ಲಿ 23 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಕೇಳಿದ್ದ ಅನುಮತಿಗೆ ಸರಕಾರ ಒಪ್ಪಿಗೆ ನೀಡಿದೆ. ಕಟ್ಟಡ ಕಾಮಗಾರಿಗೆ ವಿವಿಯೆ ಟೆಂಡರ್ ಕರೆಯಬೇಕಿದೆ ಎಂದು ತಿಳಿಸಿದರು.
ವಿವಿಯಲ್ಲಿ ಖಾಲಿಯಿರುವ ಕೆಲವು ಹುದ್ದೆಗಳನ್ನು ಭರ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ವಿಷಯ ಹೊರತುಪಡಿಸಿದರೆ, ರಾಜ್ಯ ಸರಕಾರದಿಂದ ಯಾವುದೆ ಕೆಲಸಗಳು ವಿವಿಗೆ ಆಗುವುದು ಬಾಕಿಯಿಲ್ಲ ಎಂದರು.
ಬೆಂಗಳೂರು, ಮೈಸೂರು, ತುಮಕೂರು ಹಾಗೂ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಗಳು ಖಾಲಿಯಿವೆ. ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಶೋಧನಾ ಸಮಿತಿಯು ಪ್ರತಿ ವಿವಿಗೆ ಮೂರು ಹೆಸರುಗಳನ್ನು ಸೂಚಿಸಿದೆ. ಈ ಪೈಕಿ ತಲಾ ಒಂದು ಹೆಸರನ್ನು ಸರಕಾರದ ವತಿಯಿಂದ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಾಗಿದೆ. ಆದರೆ, ಈವರೆಗೂ ಕುಲಪತಿಗಳ ನೇಮಕವಾಗಿಲ್ಲ ಎಂದರು.
ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕನ್ನಡಿಗರಿಗೆ ಶೇ.50ರಷ್ಟು ಸ್ಥಾನಗಳನ್ನು ಮೀಸಲಿರಿಸುವ ಸಂಬಂಧ ವಿಧಾನಮಂಡಲದಲ್ಲಿ ಕಾಯ್ದೆ ಅಂಗೀಕರಿಸಿ ಕಳುಹಿಸಲಾಗಿತ್ತು. ಆದರೆ, ಕಾಯ್ದೆಗೆ ಅಂಕಿತ ಹಾಕದೆ, ಕೆಲವು ಸ್ಪಷ್ಟಣೆಗಳನ್ನು ಕೋರಿ ಕಡತವನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ ಎಂದು ಬಸವರಾಜರಾಯರೆಡ್ಡಿ ಹೇಳಿದರು.
ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮಾನ್ಯತೆ ನವೀಕರಿಸುವಂತೆ ಕೋರಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ವಿಶ್ವವಿದ್ಯಾನಿಲಯ ಅನುದಾನ ಆಯೋಗ(ಯುಜಿಸಿ)ದ ಅಧ್ಯಕ್ಷರನ್ನು ಎರಡು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಅಲ್ಲದೆ, ಪ್ರಧಾನಮಂತ್ರಿಗೆ ಮುಖ್ಯಮಂತ್ರಿ ಮೂಲಕ ಪತ್ರವನ್ನು ಬರೆಸಿದ್ದೇನೆ. ಆದರೆ, ಈವರೆಗೆ ಯಾವುದೆ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿವಿಗಳ ಆಡಳಿತದಲ್ಲಿ ರಾಜ್ಯ ಸರಕಾರಕ್ಕೆ ಯಾವುದೆ ಹಿಡಿತವಿಲ್ಲ. ಹೀಗಾಗಿ ಸಮಗ್ರ ಕಾಯ್ದೆ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ. ತಾಂತ್ರಿಕ ವಿವಿ ಅವ್ಯವಹಾರಗಳ ತನಿಖೆಗೆ ಸರಕಾರದ ಅನುಮತಿ ಪಡೆಯದೆ ನ್ಯಾ.ಕೇಶವನಾರಾಯಣ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಇದರಿಂದಾಗಿ, ಆ ಸಮಿತಿಗೆ ಕಾನೂನಿನ ಮಾನ್ಯತೆಯಿಲ್ಲ. ಹಾಗಾಗಿ, ನಿನ್ನೆಯಷ್ಟೆ ಹೊಸ ಸಮಿತಿ ರಚಿಸಿ ಆದೇಶಿಸಲಾಗಿದೆ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು.