×
Ad

ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2017-09-14 21:23 IST

ಬೆಂಗಳೂರು, ಸೆ.14: ರಾಜ್ಯದಲ್ಲಿ 21ಕ್ಕಿಂತ ಕಡಿಮೆ ವಯಸ್ಸಿನವರು ಮದ್ಯ ಸೇವಿಸುವುದು ಮತ್ತವರಿಗೆ ಮದ್ಯ ಮಾರಾಟ ಮಾಡುವುದಕ್ಕೆ ನಿಷೇಧ ಹೇರಲು ರೂಪಿಸಲಾಗಿರುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಈ ಸಂಬಂಧ ಲಯ ಸಜ್ಜನ್ ಮೆರಿಯಾಂಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಅಬಕಾರಿ ಇಲಾಖೆ ಆಯುಕ್ತರು, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಹಾಗೂ ಜಂಟಿ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೆ, ಅರ್ಜಿಗೆ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

21ಕ್ಕಿಂತ ಕಡಿಮೆ ವಯಸ್ಸಿನವರು ಮದ್ಯ ಸೇವಿಸುವುದು ಹಾಗೂ ಅವರಿಗೆ ಮದ್ಯ ಮಾರಾಟ ಮಾಡುವುದಕ್ಕೆ ಕರ್ನಾಟಕ ಅಬಕಾರಿ ಇಲಾಖೆ ಕಾಯ್ದೆ-1965ರ ಸೆಕ್ಷನ್ 10ರ ಅನ್ವಯ ನಿಷೇಧ ಹೇರಲಾಗಿದೆ. ಇನ್ನು ಅಬಕಾರಿ ಕಾಯ್ದೆಯ ಸೆಕ್ಷನ್ 36(1)(ಜಿ) ಅನ್ವಯ 18ಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಾದಕ ಪದಾರ್ಥ ಮಾರುವುದು ಸಹ ಅಪರಾಧ. ಇಂತಹ ನಿಯಮ ರೂಪಿಸಿದ ಹೊರತಾಗಿಯೂ ಮಕ್ಕಳಿಗೆ ಮದ್ಯ ಹಾಗೂ ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದಕ್ಕೆ ಮುಖ್ಯ ಕಾರಣ, ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವುದರಲ್ಲಿ ಸರಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿರುವುದು ಹಾಗೂ ಸರಕಾರ ತನ್ನ ಕರ್ತವ್ಯ ನಿರ್ವಹಿಸುವುದರಲ್ಲಿ ಸಂಪೂರ್ಣ ವಿಫಲವಾಗಿರುವುದು ಎಂದು ಅರ್ಜಿಯಲ್ಲಿ ದೂರಲಾಗಿದೆ.

ಹೀಗಾಗಿ, ಕರ್ನಾಟಕ ಅಬಕಾರಿ ಇಲಾಖೆ ಕಾಯ್ದೆ-1965ರ ಸೆಕ್ಷನ್ 10ನ್ನು ಕಟ್ಟುನಿಟ್ಟಾಗಿ ರಾಜ್ಯದಲ್ಲಿ ಜಾರಿ ಮಾಡಬೇಕು. 21 ವರ್ಷಕ್ಕಿಂತ ಕೆಳಗಿನವರಿಗೆ ಮದ್ಯ ಮತ್ತು ಮದ್ಯದ ಉತ್ಪನ್ನಗಳನ್ನು ಮಾರುವ ಮದ್ಯ ಮರಾಟಗಾರರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸಬೇಕು. 21 ವರ್ಷಕ್ಕಿಂತ ಕಡಿಮೆ ಇರುವವರು ಮದ್ಯ ಮಾರುವುದರ ಬಗ್ಗೆ ಗಮನ ಇಡಲು ಸೂಕ್ತ ಮಾರ್ಗಸೂಚಿ ಹಾಗೂ ನಿಯಮ ರೂಪಿಸಬೇಕು. ಮದ್ಯ ಖರೀದಿಸಿದವರ ವಯಸ್ಸು ಮತ್ತು ಗುರುತಿನ ದಾಖಲೆ ನಿರ್ವಹಣೆ ಮಾಡಲು ಯೋಜನೆ ರೂಪಿಸಿ ಜಾರಿಗೊಳಿಸಬೇಕು. ಮಕ್ಕಳಿಗೆ ಮದ್ಯ ಮಾರಾಟ ಮಾಡಿದ ಪ್ರಕರಣ ಕಂಡುಬಂದಲ್ಲಿ, ಆ ಸಂಬಂಧ ಬಾಲ ನ್ಯಾಯ ಕಾಯ್ದೆ-2015ರ (ಮಕ್ಕಳ ಆರೈಕೆ ಮತ್ತು ಸಂರಕ್ಷಣೆ) ಸೆಕ್ಷನ್ 77ರ ಕ್ರಮ ಜರುಗಿಸುವ ಸಂಬಂಧ ರಾಜ್ಯ ಸರಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News