×
Ad

ಶಾಸಕ ಸುರೇಶ್‌ ಕುಮಾರ್‌ರಿಂದ ಸಾಮಾನ್ಯ ಜನತೆಯ ಭಾವನೆಗೆ ಅವಮಾನ: ದಿನೇಶ್ ಅಮೀನ್‌ಮಟ್ಟು

Update: 2017-09-14 21:29 IST

ಬೆಂಗಳೂರು, ಸೆ.14: ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯನ್ನು ವಿರೋಧಿಸಿ ಆಯೋಜಿಸಿದ್ದ ಸಮಾವೇಶವನ್ನು ಕಾಂಗ್ರೆಸ್ ಪ್ರಾಯೋಜಿತ ಸಮಾವೇಶ ಎನ್ನುವ ಮೂಲಕ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸಮಾವೇಶದಲ್ಲಿ ಭಾಗವಹಿಸಿದ್ದ ಸಾಮಾನ್ಯ ಜನತೆಯ ಭಾವನೆಗಳಿಗೆ ಅವಮಾನ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ತಿಳಿಸಿದ್ದಾರೆ.

ಗೌರಿ ಲಂಕೇಶ್ ಹತ್ಯಾ ವಿರೋಧಿ ಸಮಾವೇಶವನ್ನು ಕಾಂಗ್ರೆಸ್ ಪ್ರಾಯೋಜಿತ ಮತ್ತು ಇದಕ್ಕೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರೇ ಮಾರ್ಗದರ್ಶಕರು ಎಂದು ಶಾಸಕ ಸುರೇಶ್ ಕುಮಾರ್ ಆರೋಪಿಸಿದ್ದಾರೆ. ಅವರ ಈ ಹೇಳಿಕೆ ಕೇವಲ ರಾಜಕೀಯ ಪ್ರೇರಿತವಷ್ಟೇ. ಪತ್ರಕರ್ತೆ ಗೌರಿ ಲಂಕೇಶ್ ನಾನು ಪ್ರತಿನಿಧಿಸುವ ಪತ್ರಕರ್ತರ ಕುಟುಂಬಕ್ಕೆ ಸೇರಿದವರು. ಹೀಗಾಗಿ ಅವರ ಮೇಲಿನ ಪ್ರೀತಿ ಹಾಗೂ ಹತ್ಯೆಯಿಂದಾಗಿರುವ ಆಘಾತ ನನ್ನನ್ನು ಸಮಾವೇಶದಲ್ಲಿ ಭಾಗವಹಿಸುವಂತೆ ಮಾಡಿತು ಎಂದು ಸ್ಪಷ್ಟಪಡಿಸಿದರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ಆಯೋಜಿಸಿದ್ದ ಸಮಾವೇಶದಲ್ಲಿ ಸಾಮಾನ್ಯಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅವರೆಲ್ಲರೂ ಗೌರಿ ಲಂಕೇಶ್ ಮೇಲಿನ ಪ್ರೀತಿಯಿಂದಾಗಿ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿದ್ದರು. ಹೀಗಾಗಿ ಅವರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಶಾಸಕ ಸುರೇಶ್‌ಕುಮಾರ್ ಹೇಳಿಕೆ ನೀಡಿರುವುದು ಸರಿಯಲ್ಲವೆಂದು ವಿಷಾದಿಸಿದರು.

ಹತ್ಯೆ ವಿರೋಧಿ ಸಮಾವೇಶವನ್ನು ಕೇವಲ ನಾಲ್ಕು ದಿನಗಳಲ್ಲಿ ಯೋಜಿಸಿ ಯಶಸ್ವಿಗೊಳಿಸಲಾಗಿದೆ. ಜೀವಪರ ಮನಸಿನ ನೂರಾರು ಮಂದಿ ಹಗಲು ರಾತ್ರಿ ಎನ್ನದೆ ದುಡಿದಿದ್ದಾರೆ. ಈ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲದ ಸುರೇಶ್ ಕುಮಾರ್ ಇಡೀ ಸಮಾವೇಶದ ಯಶಸ್ಸಿನ ಹೊಣೆಯನ್ನು ನನಗೆ ಹೊರಿಸಿರುವುದರಿಂದ ಅಪರಾಧಿ ಪ್ರಜ್ಞೆ ಕಾಡುತ್ತಿದೆ. ಹೀಗಾಗಿ ಸುರೇಶ್ ಕುಮಾರ್ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News