×
Ad

ಕ್ರೈಸ್ತ ವಿಚಾರ ವೇದಿಕೆಗೆ ಆರ್ಚ್ ಬಿಷಪ್ ಚಾಲನೆ

Update: 2017-09-15 19:56 IST

ಬೆಂಗಳೂರು, ಸೆ.15: ಕ್ರೈಸ್ತರು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು, ಪರಿಹಾರ ಕಂಡುಕೊಳ್ಳಲು ಅಸ್ತಿತ್ವಕ್ಕೆ ಬಂದಿರುವ ಕ್ರೈಸ್ತ ವಿಚಾರ ವೇದಿಕೆ(ಕ್ರಿಶ್ಚಿಯನ್ ಥಿಂಕ್ ಟ್ಯಾಂಕ್)ಗೆ ಬೆಂಗಳೂರಿನ ಆರ್ಚ್‌ಬಿಷಪ್ ಡಾ.ಬರ್ನಾಡ್ ಮೋರಸ್ ಚಾಲನೆ ನೀಡಿದ್ದಾರೆ.

ಶುಕ್ರವಾರ ನಗರದ ಬೆನ್ಸನ್‌ಟೌನ್‌ನಲ್ಲಿನ ತಮ್ಮ ನಿವಾಸದ ಆವರಣದಲ್ಲಿರುವ ಪಾಲನ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸುಮಾರು 120 ಗಣ್ಯರ ಸಮ್ಮುಖದಲ್ಲಿ ಈ ವೇದಿಕೆಗೆ ಚಾಲನೆ ನೀಡಿ ಅವರು ಶುಭ ಹಾರೈಸಿದರು.

ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.2.1ರಷ್ಟಿರುವ ಕ್ರೈಸ್ತರು ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಸಮುದಾಯ ಹಾಗೂ ದೇಶದ ಭವಿಷ್ಯಕ್ಕಾಗಿ ಮತ್ತಷ್ಟು ಕೆಲಸವನ್ನು ನಾವು ಮಾಡಬೇಕಿದೆ ಎಂದು ಬರ್ನಾಡ್ ಮೋರಸ್ ಕರೆ ನೀಡಿದರು.

ರಾಜ್ಯದಲ್ಲಿಯೂ ಕ್ರೈಸ್ತರನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಬಲಗೊಳಿಸಬೇಕಿದೆ. ಕ್ರೈಸ್ತ ವಿಚಾರ ವೇದಿಕೆಯು ಈ ನಿಟ್ಟಿನಲ್ಲಿ ಮುನ್ನಡೆಯುವ ಆಶಯವನ್ನು ಹೊಂದಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಫಾ.ಸ್ಟಾನಿ ಡಿ’ಸೋಜಾ, ಕ್ರೈಸ್ತರು ಸಮಾಜದ ಎಲ್ಲ ವಲಯಗಳಲ್ಲಿಯೂ ನಾವು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಅತ್ಯಂತ ಕಡಿಮೆ ಜನಸಂಖ್ಯೆಹೊಂದಿರುವ ನಾವು ಆತಂಕದಲ್ಲಿದ್ದೇವೆ. ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಅವುಗಳನ್ನು ಪರಿಹರಿಸುವವರು ಯಾರು ಎಂಬುದರ ಬಗ್ಗೆಯೂ ನಾವು ಮಾಹಿತಿಯನ್ನು ಹೊಂದಿರಬೇಕು. ಬಿಷಪ್ ಅವರ ಮಾರ್ಗದರ್ಶನದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದರು.

ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಮಾತನಾಡಿ, ನಮ್ಮ ಸಮುದಾಯಕ್ಕೆ ರಾಜಕೀಯ ಕ್ಷೇತ್ರವು ಒಂದು ಸವಾಲಾಗಿದೆ. ಸಮಸ್ಯೆಗಳನ್ನು ಎದುರಿಸಿ ಮುನ್ನಡೆಯುವ ಸಾಮರ್ಥ್ಯವನ್ನು ನಾವು ವೃದ್ಧಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತಷ್ಟು ಸಾಧಿಸಲು ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಬೇಕು, ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಕರನ್ನು ತಯಾರುಗೊಳಿಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕ್ರೈಸ್ತ ವಿಚಾರ ವೇದಿಕೆಯ ಕಾರ್ಯದರ್ಶಿ ಫಾ.ಅರುಳ್ ಸೆಲ್ವಕುಮಾರ್, ಬಿಷಪ್ ಪೀಟರ್ ಮಚಾಡೋ, ಡಾ.ಸೀಮಾ ಫರ್ನಾಂಡಿಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News