ಸೆ.23ಕ್ಕೆ ಭ್ರಷ್ಟಾಚಾರದ ದಾಖಲೆ ಬಿಡುಗಡೆ: ಯಡಿಯೂರಪ್ಪ
ಬೆಂಗಳೂರು, ಸೆ. 15: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಕುಟುಂಬ, ಸಂಪುಟ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು ನಡೆಸಿರುವ ಭ್ರಷ್ಟಾಚಾರ, ಹಗರಣಗಳ ದಾಖಲೆಗಳನ್ನು ಸೆ.23ರಂದು ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಶುಕ್ರವಾರ ಶಿಕ್ಷಕರ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಮೇಲ್ಮನೆ ಸದಸ್ಯರು ಕೈಗೊಂಡಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಬಳಿಕ ಮಾತನಾಡಿದ ಅವರು, ಭ್ರಷ್ಟ್ರಾಚಾರ ರಹಿತ, ಪಾರದರ್ಶಕ ಆಡಳಿತ ಎಂಬ ಬಡಾಯಿ ಕೊಚ್ಚಿಕೊಳ್ಳುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಕ್ರಮ ಬಯಲು ಮಾಡಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಸರಕಾರದ ಅಕ್ರಮಗಳ ಬಗ್ಗೆ ಯಾವುದೇ ಆಧಾರ ರಹಿತ ದಾಖಲೆಗಳನ್ನು ಬಿಡುಗಡೆ ಮಾಡುವುದಿಲ್ಲ. ಬದಲಿಗೆ ರಾಜ್ಯ ಸರಕಾರದ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸುತ್ತಿದ್ದು, ಶೀಘ್ರದಲ್ಲೆ ಬಿಡುಗಡೆ ಮಾಡುವೆ. ಅಗ್ಗದ ಪ್ರಚಾರಕ್ಕಾಗಿ ಈ ಕೆಲಸಕ್ಕೆ ಕೈಹಾಕಿಲ್ಲ ಎಂದು ಸ್ಪಷ್ಟನೆ ನೀಡಿದರು.
ಈಗಾಗಲೇ ರಾಜ್ಯ ಸರಕಾರದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಆ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ಹಲವು ಕಡತಗಳನ್ನು ನಾಪತ್ತೆ ಮಾಡಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಆದರೂ, ನಮ್ಮದೆ ಆದ ಮೂಲಗಳಿಂದ ಕಡತ ಸಂಗ್ರಹ ಮಾಡುತ್ತಿದ್ದೇವೆ ಎಂದರು.
ಬಿಜೆಪಿ ಬೆಂಬಲ: ಶಿಕ್ಷಕರು ಮತ್ತು ಪದವೀಧರರ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಮೇಲ್ಮನೆ ಸದಸ್ಯರು ಹತ್ತು ದಿನಗಳಿಂದ ವಿಧಾನಸೌಧದಲ್ಲೇ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡಿದ್ದು, ಸೌರ್ಜನ್ಯಕ್ಕಾದರೂ ಸಿಎಂ ಭೇಟಿ ಮಾಡಿಲ್ಲ. ಮೇಲ್ಮನೆ ಸದಸ್ಯರ ಹೋರಾಟಕ್ಕೆ ಬಿಜೆಪಿ ಬೆಂಬಲವಿದೆ ಎಂದು ಅವರು ಪ್ರಕಟಿಸಿದರು.