×
Ad

ಬಿಬಿಎಂಪಿ ಸದಸ್ಯರನ್ನು ಅನರ್ಹಗೊಳಿಸಲು ಆಗ್ರಹ

Update: 2017-09-15 20:06 IST

ಬೆಂಗಳೂರು, ಸೆ. 15: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಸದಸ್ಯರು ವಾರ್ಷಿಕ ಆಸ್ತಿಯನ್ನು ಘೋಷಣೆ ಮಾಡದೇ ಕೆಎಂಸಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ, ಕೂಡಲೇ ಎಲ್ಲ ಸದಸ್ಯರನ್ನು ಅಸಿಂಧುಗೊಳಿಸಬೇಕು ಎಂದು ನವ ಭಾರತ ಪಕ್ಷ ಆಗ್ರಹಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ಬಸವರಾಜು, ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ನಂತರ ಪ್ರತಿ ವರ್ಷ ನಿಗಧಿತ ಸಮಯದೊಳಗೆ ಎಲ್ಲ ಸದಸ್ಯರು ತಮ್ಮ ಆಸ್ತಿಯನ್ನು ಮೇಯರ್ ಎದುರು ಘೋಷಣೆ ಮಾಡಬೇಕು. ಇಲ್ಲದಿದ್ದರೆ ಕೆಎಂಸಿ ಕಾಯ್ದೆ ಪ್ರಕಾರ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಪಾಲಿಕೆ ಸದಸ್ಯರ ಮಾನ್ಯತೆ ರದ್ದುಗೊಳ್ಳುತ್ತದೆ ಎಂದು ಹೇಳಿದರು.

ಆದರೆ, ಪದ್ಮಾವತಿ ಮೇಯರ್ ಆಗಿ ಪದವಿ ಸ್ವೀಕರಿಸಿದ ಸೆಪ್ಟೆಂಬರ್ 2015 ರಿಂದ ನವೆಂಬರ್ 2015 ರ ಅವಧಿಯಲ್ಲಿ ಯಾರೂ ತಮ್ಮ ಆಸ್ತಿ ವಿವರಗಳನ್ನು ಘೋಷಣೆ ಮಾಡಿಕೊಂಡಿಲ್ಲ. ಈ ಕುರಿತು ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತರ ಗಮನಕ್ಕೆ ತರಲಾಗಿದೆ. ಆದರೆ, ಅವರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ, ವಿಳಂಬ ನೀತಿ ಅನುಸರಿಸಿದ್ದಾರೆ. ಅನಂತರ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಸರಕಾರದ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಆಯುಕ್ತರಿಗೆ ಪತ್ರ ಬರೆದು, ದೂರಿನಲ್ಲಿರುವ ಅಂಶಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ ಎಂದರು.

ಮುಖ್ಯ ಕಾರ್ಯದರ್ಶಿ ಪತ್ರ ಬರೆದ ನಂತರವೂ ಆಯುಕ್ತರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಆದರೆ, ಸೆ.28 ರಂದು ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಯಲಿದ್ದು, ಕಾಯ್ದೆಯ ಪ್ರಕಾರ ಮಾನ್ಯತೆ ಕಳೆದುಕೊಂಡಿರುವ ಸದಸ್ಯರು ಮತ ಚಲಾಯಿಸಲು ಹೇಗೆ ಸಾಧ್ಯ. ಹೀಗಾಗಿ, ಕೂಡಲೇ ಮೇಯರ್ ಚುನಾವಣೆಯನ್ನು ರದ್ದು ಮಾಡಬೇಕು. ಎಲ್ಲ ಪಾಲಿಕೆ ಸದಸ್ಯರನ್ನು ಅಮಾನ್ಯಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಬಿಬಿಎಂಪಿ ಅಧಿಕಾರಿಗಳು ತರಾತುರಿಯಲ್ಲಿ ಪಾಲಿಕೆ ಅಂತರ್ಜಾಲದಲ್ಲಿ ಸದಸ್ಯರು ಆಸ್ತಿ ವಿವರ ಘೋಷಣೆ ಮಾಡಿಕೊಂಡಿದ್ದಾರೆ ಎಂದು ದಾಖಲಿಸಿದೆ. ಆದರೆ, ಎಲ್ಲ ಸದಸ್ಯರು ಒಂದೇ ದಿನದಂದು ತಮ್ಮ ಆಸ್ತಿ ವಿವರ ಘೋಷಣೆ ಮಾಡಿದ ದಿನಾಂಕ ನಮೂದಿಸಲಾಗಿದೆ. ನಾವು ಆರ್‌ಟಿಐ ಮೂಲಕ ಪಡೆದ ಮಾಹಿತಿಯಲ್ಲಿ ಮೇಯರ್ ಅವರ ಸ್ವೀಕೃತಿ ಪತ್ರದಲ್ಲಿ ಈ ಕುರಿತ ಯಾವುದೇ ಮಾಹಿತಿ ಇಲ್ಲ. ಅಕ್ರಮವಾಗಿ ಇದನ್ನು ಮಾಡಿದ್ದು, ಹಿಂದಿನ ಮೇಯರ್ ದಿನಾಂಕಗಳನ್ನು ನಕಲಿಸಿದ್ದಾರೆ ಎಂದು ದೂರಿದರು.

ಸರಕಾರ ಒಂದು ವಾರದೊಳಗೆ ಎಲ್ಲ ಸದಸ್ಯರ ಮಾನ್ಯತೆ ರದ್ಧು ಮಾಡಬೇಕು. ಮೇಯರ್ ಮತ್ತು ಉಪಮೇಯರ್ ಚುನಾವಣೆಯನ್ನು ರದ್ಧು ಮಾಡಬೇಕು. ಇಲ್ಲದಿದ್ದರೆ ನ್ಯಾಯಾಂಗ ಹೋರಾಟ ಮಾಡಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅನಿಲ್‌ಶೆಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರೋಲ್ಯಾಂಡ್ ಸೊನ್ಸ್, ಆರ್‌ಟಿಐ ಕಾರ್ಯಕರ್ತ ಆನಂದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News