ಸುಗ್ರೀವಾಜ್ಞೆಗೆ ರಾಜ್ಯಪಾಲರು ಅನುಮೋದನೆ ನೀಡಲು ಮಂಗ್ಳೂರು ವಿಜಯ ಒತ್ತಾಯ
ಬೆಂಗಳೂರು, ಸೆ.15: ಎಸ್ಸಿ-ಎಸ್ಟಿ ನೌಕರರ ಮುಂಭಡ್ತಿ ಸಂಬಂಧ ರಾಜ್ಯ ಸರಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಕೂಡಲೇ ರಾಜ್ಯಪಾಲರು ಅನುಮೋದನೆ ನೀಡುವಂತೆ ಸಮಾಜವಾದಿ ಚಿಂತಕ ಮಂಗ್ಳೂರು ವಿಜಯ ಒತ್ತಾಯಿಸಿದ್ದಾರೆ.
ಶುಕ್ರವಾರ ನಗರದ ಮೌರ್ಯವೃತ್ತದ ಗಾಂಧಿ ಪ್ರತಿಮೆ ಎದುರು ಮುಂಭಡ್ತಿ ವಿಚಾರದಲ್ಲಿ ರಾಜ್ಯ ಸರಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಕೂಡಲೇ ರಾಜ್ಯಪಾಲರು ಅನುಮೋದನೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಧರಣಿಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರ ಎಸ್ಸಿ-ಎಸ್ಟಿ ನೌಕರರ ಹಿತ ಕಾಯಲು ಮುಂಭಡ್ತಿ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿ ಇದರ ಅನುಮೋದನೆಗೆ ರಾಜ್ಯಪಾಲರಿಗೆ ಕಳಿಸಿತ್ತು. ಆದರೆ, ರಾಜ್ಯಪಾಲರು ಕೆಲವು ವಿವರಣೆಗಳನ್ನು ಕೇಳಿ ವಾಪಾಸ್ಸು ಕಳಿಸಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಲಿತರ ಪೂರಕವಾದ ಗುತ್ತಿಗೆ ಮೀಸಲಾತಿ ವಿಚಾರವಾಗಿ ಸರಕಾರ ದಲಿತ ಗುತ್ತಿಗೆ ಮೀಸಲಾತಿ ವಿಚಾರವಾಗಿ ಸರಕಾರ ದಲಿತ ಗುತ್ತಿಗೆದಾರರಿಗೆ ಎಲ್ಲ ಟೆಂಡರ್‌ಗಳಲ್ಲಿ 50 ಲಕ್ಷದವರೆಗೆ ಮೀಸಲಾತಿ ನೀಡಲು ತೀರ್ಮಾನಿಸಿ ಆದೇಶ ಹೊರಡಿಸಿ ಗುತ್ತಿಗೆಯಲ್ಲಿನ ಮೀಸಲಾತಿ ಆಜ್ಞೆಯ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೆ ಸರಕಾರ ಕಳಿಸಿದಾಗ ಅದನ್ನು ರಾಷ್ಟ್ರಪತಿ ಕಳಿಸುವ ಮೂಲಕ ದಲಿತ ವಿರೋಧಿ ನಿಲುವು ತಾಳಿದ್ದರು ಎಂದು ಆರೋಪಿಸಿದರು.
ದಸಂಸ ರಾಜ್ಯ ಸಂಚಾಲಕ ಲಕ್ಷ್ಮೀ ನಾರಾಯಣ ನಾಗವಾರ ಮಾತನಾಡಿ, ಬಿಜೆಪಿ ದಲಿತರನ್ನು ಓಲೈಸಲು ದಲಿತರ ಮನೆಗಳಿಗೆ ಬಂದು ಊಟ ಮಾಡುತ್ತಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಆಚರಿಸುತ್ತಾರೆ. ಆದರೆ, ಬಿಜೆಪಿ ಹಿನ್ನೆಲೆಯಲ್ಲಿ ಬಂದಿರುವ ರಾಜ್ಯಪಾಲರು ದಲಿತ ವಿರೋಧಿ ನಿಲುವುಗಳನ್ನು ನೋಡುತ್ತಾ ಸುಮ್ಮನಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಸರಕಾರ ಕೈಗೊಂಡಿದ್ದ ಮುಂಭಡ್ತಿ ಸುಗ್ರೀವಾಜ್ಞೆಯು ಅವಮಾನಕರವಾಗಿ ರಾಜ್ಯಪಾಲರಿಂದ ಹಿಂದಕ್ಕೆ ಬಂದಿದೆ. ರಾಜ್ಯಪಾಲರು ಕೇಳಿರುವ ಪ್ರಶ್ನೆಗಳಲ್ಲಿ ಯಾವುದೇ ಅರ್ಥಗಳಿಲ್ಲ. ಸುಗ್ರೀವಾಜ್ಞೆಯ ಅಗತ್ಯತೆಯ ಬಗ್ಗೆ ಪ್ರಶ್ನಿಸಿರುವ ರಾಜ್ಯಪಾಲರು ಸಂವಿಧಾನಿಕ ಸವಲತ್ತುಗಳು ನಾಶವಾಗುತ್ತಿರುವ ಬಗ್ಗೆ ಯಾವತ್ತೂ ಮಾತನಾಡಿಲ್ಲ ಎಂದು ಅಸಮಾಧನ ವ್ಯಕ್ತಪಡಿಸಿದರು.
ರಾಜ್ಯಪಾಲರು ಈ ಕೂಡಲೇ ಎಸ್ಸಿ-ಎಸ್ಟಿ ನೌಕರರ ಮುಂಭಡ್ತಿ ಸಂಬಂಧ ರಾಜ್ಯ ಸರಕಾರದ ಸುಗ್ರೀವಾಜ್ಞೆಗೆ ಅನುಮೋದನೆ ನೀಡಬೇಕು. ಇಲ್ಲದಿದ್ದಲ್ಲಿ, ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲಾಗುವುದೆಂದು ಲಕ್ಷ್ಮೀನಾರಾಯಣ ನಾಗವಾರ ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ದೇವರಾಜ ಅರಸ್ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ.ಎನ್.ವಿ.ನರಸಿಂಹಯ್ಯ, ದಲಿತ ಮುಖಂಡರಾದ ಜೀವನಹಳ್ಳಿ ಆರ್.ವೆಂಕಟೇಶ್, ಕಲ್ಲಪ್ಪ ಕಾಂಬಳೆ, ಕೆಂಪಣ್ಣ ಸಾಗ್ಯ, ತರೀಕೆರೆ ನಾಗರಾಜ್ ಸೇರಿ ಪ್ರಮುಖರಿದ್ದರು.