ಆಲಮ್ ಪಾಷಾ ಅಭ್ಯರ್ಥಿಗಳನ್ನು ಬೆಂಬಲಿಸಲು ಮನವಿ
ಬೆಂಗಳೂರು, ಸೆ. 15: ಅಮಾನತ್ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕ ಮಂಡಳಿಗೆ ಸೆ.17ರಂದು ನಡೆಯಲಿರುವ ಚುನಾವಣೆಯಲ್ಲಿ ನಮ್ಮ ಬಣದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಹೆಲ್ಪಿಂಗ್ ಸಿಟಿಝನ್ ಡಾಟ್ ಕಾಮ್‌ನ ಸಂಸ್ಥಾಪಕ ಎ.ಆಲಮ್ ಪಾಷಾ ಇಂದಿಲ್ಲಿ ಮನವಿ ಮಾಡಿದ್ದಾರೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ, ತುಳಿತಕ್ಕೊಳಗಾದ ವರ್ಗದ ಜನರು ತಮ್ಮ ದುಡಿಮೆಯಲ್ಲಿ ಕೂಡಿಟ್ಟ ಹಣವನ್ನು ಮಕ್ಕಳ ಮದುವೆ, ವೈದ್ಯಕೀಯ ಚಿಕಿತ್ಸೆ, ಹಜ್ ಯಾತ್ರೆ ಹಾಗೂ ಮತ್ತಿತರ ಕೆಲಸಗಳಿಗಾಗಿ ಬ್ಯಾಂಕಿನಲ್ಲಿ ಕೂಡಿಟ್ಟ ಹಣದ ಮೂಲಕ ಕೆಲವು ರಾಜಕಾರಣಿಗಳು, ಬಿಲ್ಡರ್‌ಗಳು ಅಪಾರವಾದ ಲಾಭ ಪಡೆದುಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರನ್ನು ವಂಚಿಸುತ್ತಿದ್ದಾರೆ. ಬೃಹತ್ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿದರು.
ಅಮಾನತ್ ಬ್ಯಾಂಕನ್ನು ಉಳಿಸಲು ಇದೀಗ ಹೋರಾಟದ ಹಾದಿ ಹಿಡಿಯಬೇಕಿದೆ. ಈ ನಿಟ್ಟಿನಲ್ಲಿ ಬ್ಯಾಂಕಿನ ನೂತನ ನಿರ್ದೇಶಕ ಮಂಡಳಿಗೆ ನಡೆಯತ್ತಿರುವ ಚುನಾವಣೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿರುವ ಹೆಲ್ಪಿಂಗ್ ಸಿಟಿಝನ್ ಫೋರಂ ಅನ್ನು ಬೆಂಬಲಿಸಿ. ನಿಸ್ವಾರ್ಥ ಹಾಗು ಸಭ್ಯ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ನಮ್ಮ ಬಣದ ಎಲ್ಲ ಸದಸ್ಯರು ಅಮಾನತ್ ಬ್ಯಾಂಕನ್ನು ಎಲ್ಲ ಕೋ ಆಪರೇಟಿವ್ ಬ್ಯಾಂಕುಗಳ ರೀತಿಯಲ್ಲಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಪ್ರಣಾಳಿಕೆ ಘೋಷಣೆ: ನಿಗದಿತ ಠೇವಣಿ ಮೊತ್ತವನ್ನು ಆರ್‌ಬಿಐನಲ್ಲಿ ಜಮೆ ಮಾಡುವುದು ನಮ್ಮ ಮೊದಲ ಆದ್ಯತೆ. ಇದರಿಂದ ಆರ್‌ಬಿಐ ಕಾಯ್ದೆಯ ಸೆಕ್ಷನ್ 35ಎ ತೆರವುಗೊಳ್ಳಲಿದ್ದು, ಬ್ಯಾಂಕ್ ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಜನ ಸಾಮಾನ್ಯರು ಠೇವಣಿಯಿಟ್ಟಿರುವ 130 ಕೋಟಿ ರೂ.ಗಳ ಮೊತ್ತದ ಪಾವತಿಗೆ ಈಗಿನ ಆಡಳಿತ ಮಂಡಳಿ ಹೇರಿರುವ ನಿರ್ಬಂಧ ತೆರವುಗೊಳಿಸಿ, 6 ತಿಂಗಳಲ್ಲಿ ಈ ಮೊತ್ತ ಹಿಂದಿರುಗಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಹಿಂದಿನ ಆಡಳಿತ ಮಂಡಳಿ ವಜಾಗೊಳಿಸಿರುವ ಸಿಬ್ಬಂದಿಯನ್ನು ಮರು ನೇಮಕ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ, ಮಾಜಿ ನಿರ್ದೇಶಕರಿಂದ ಮೋಸಹೋದ 165 ಅಮಾಯಕ ಸಿಬ್ಬಂದಿಗೆ ನ್ಯಾಯ ಒದಗಿಸಲಾಗುತ್ತದೆ. ದುರ್ಬಳಕೆಯಾಗಿರುವ ಕೋಟ್ಯಂತರ ಸಾಲದ ಮೊತ್ತವನ್ನು ವಸೂಲಿ ಮಾಡಲಾಗುತ್ತದೆ. ಮಾಜಿ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಅಸದುಲ್ಲಾ ಖಾನ್ ಹಾಗೂ ಬೋರ್ಡ್‌ನಲ್ಲಿದ್ದ ಅವರ ಸಹವರ್ತಿಗಳಿಂದ ಲೂಟಿಯಾಗಿರುವ ಕೋಟ್ಯಂತರ ರೂ.ಗಳ ಹಣವನ್ನು ಕಾನೂನು ಪ್ರಕಾರ ವಸೂಲಿ ಮಾಡಿ, ಠೇವಣಿದಾರರಿಗೆ ಹಿಂದುರಿಗಿಸಲಾಗುತ್ತದೆ.
ಆರ್‌ಬಿಐ ಅನುಮತಿ ಸಿಕ್ಕ ನಂತರ ಬ್ಯಾಂಕಿನ ದೈನಂದಿನ ವಹಿವಾಟಿನಲ್ಲಿ ವೇಗ ತರಲಾಗುತ್ತದೆ. ದುರ್ಬಲ ವರ್ಗಗಳಿಗೆ ಪ್ರತಿ ವರ್ಷ 1 ಸಾವಿರ ಕೋಟಿ ರೂ.ಗಳಷ್ಟು ಸಾಲ ಸೌಲಭ್ಯ ನೀಡುವ ಗುರಿ ಸೇರಿದಂತೆ ಹಲವು ಅಂಶಗಳನ್ನು ಒಳಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.