ವಿಶ್ವೇಶ್ವರಯ್ಯನವರು ನೀರಿಗಾಗಿ ಬಹುದೊಡ್ಡ ಹೋರಾಟವನ್ನೇ ನಡೆಸಿದರು: ವಕೀಲ ಶಂಕರಪ್ಪ

Update: 2017-09-15 16:15 GMT

ಬೆಂಗಳೂರು, ಸೆ.15: ಬಸವಣ್ಣನ ತತ್ವ ಅನುಸರಿಸಿದ್ದರಿಂದ ಸರ್. ಎಂ.ವಿಶ್ವೇಶ್ವರಯ್ಯನವರು ಹತ್ತಾರು ಕಲ್ಯಾಣ ಯೋಜನೆ ಜಾರಿಗೆ ತರಲು ನೆರವಾಯಿತು ಎಂದು ಹೈಕೋರ್ಟ್ ವಕೀಲ ಶಂರಪ್ಪಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಕಲಾಮೇಳ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೈಸೂರು ಸಂಸ್ಥಾನ ಜಗತ್ ಖ್ಯಾತಿ ಹೊಂದಲು ಸರ್.ಎಂ.ವಿಶ್ವೇಶರಯ್ಯ ಪಾತ್ರ ಬಲು ದೊಡ್ಡದು. ವಿಶ್ವೇಶ್ವರಯ್ಯನವರು ಕೇವಲ ಕೆಆರ್‌ಎಸ್ ಮಾತ್ರ ನಿರ್ಮಿಸಲಿಲ್ಲ. ನೀರಿಗಾಗಿ ಬಹುದೊಡ್ಡ ಹೋರಾಟವನ್ನೇ ನಡೆಸಿದರು ಎಂದು ವಿವರಿಸಿದರು.

1912ರಲ್ಲಿ ಮೈಸೂರು ಸಂಸ್ಥಾನದ ಪ್ರಾಂತ್ಯಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಅಗತ್ಯವಿರುವ ಬೆಳೆಗಳನ್ನು ಬೆಳೆಯದಂತೆ ಬ್ರಿಟಿಷರು ನಿಷೇಧ ಹೇರಿದ್ದರು. ಆದರೆ, ವಿಶ್ವೇಶರಯ್ಯನವರು ವೆಂಕಟ್‌ರಾಮ್ ಎಂಬುವವರ ಜೊತೆಗೂಡಿ ಹೋರಾಟ ನಡೆಸಿ ಅದನ್ನು ತೆರವುಗೊಳಿಸಿದರು. 1989ರಲ್ಲಿ ಒಪ್ಪಂದದ ಪ್ರಕಾರ ಕೆಆರ್‌ಎಸ್ ನಿರ್ಮಾಣ ಮೊಟಕುಗೊಳಿಸಲಾಗಿತ್ತು. ಆದರೆ, ವಿಶ್ವೇಶ್ವರಯ್ಯ ಛಲ ಬಿಡದೆ ಹೋರಾಟ ನಡೆಸಿ 9 ವರ್ಷಗಳಲ್ಲಿ ಅಣೆಕಟ್ಟೆ ನಿರ್ಮಿಸಿದರು. ಹೀಗಾಗಿ ಇಂದಿಗೂ ಚಿರಸ್ಮರಣೀಯರಾಗಿ ಉಳಿದಿದ್ದಾರೆ ಎಂದರು.

ಮಾನದಂಡ ಅಗತ್ಯ: ಸರಕಾರದ ಪ್ರಶಸ್ತಿಗಳಿಗೆ ಮಾನದಂಡ ರೂಪಿಸುವ ಅಗತ್ಯವಿದೆ ಎಂದು ಹೇಳಿದ ಅವರು, ರಾಜ್ಯೋತ್ಸವ ಪ್ರಶಸ್ತಿ ನೀಡುವಾಗ ಪಕ್ಷಾತೀತ, ಜಾತ್ಯತೀತ ಮತ್ತು ಅರ್ಹರಿಗೆ ಸಲ್ಲುವಂತೆ ಆಗಬೇಕು. ಆಗ ಮಾತ್ರ ಪ್ರಶಸ್ತಿಗೆ ಮೌಲ್ಯ ದೊರೆಯಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಹಿಂಬಾಲಕರಿಗೆ ಹೆಚ್ಚು ಪ್ರಶಸ್ತಿ ಲಭಿಸುತ್ತಿರುವುದು ದುರಂತದ ವಿಷಯ. ವಿವಿಧ ಕ್ಷೇತ್ರಗಳಲ್ಲಿರುವ ಸಾಧಕರನ್ನು ಗುರುತಿಸಿ, ಅಂತಹವರಿಗೆ ಪ್ರಶಸ್ತಿ ನೀಡುವ ಮೂಲಕ ನೇಪಥ್ಯದಲ್ಲಿರುವವರನ್ನು ಬೆಳಕಿಗೆ ತರುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗುರುಬಸವ ಸ್ವಾಮೀಜಿ, ಕಲ್ಮೇಶ್ವರ ಸ್ವಾಮೀಜಿ, ಐಎಎಸ್ ಅಧಿಕಾರಿ ಡಿ.ಎಸ್. ಅಶ್ವತ್ಥ, ಕಲಾವಿದರಾದ ಡಾ. ಚಿಕ್ಕಹೆಜ್ಜಾಜಿ ಮಹದೇವ ಮತ್ತು ಮೀನಾ, ಮಹಾಂತೇಶ ಮಲ್ಲನಗೌಡರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News