ನೋಟು ಅಮಾನ್ಯ ಕ್ರಮದಿಂದ ಪತ್ರಿಕೆಗಳ ಜಾಹೀರಾತು ಆದಾಯ ಕುಸಿತ: ಐಎನ್‌ಎಸ್

Update: 2017-09-15 16:22 GMT

ಬೆಂಗಳೂರು,ಸೆ.15: ನೋಟು ಅಮಾನ್ಯ ಕ್ರಮವು ಜಾಹೀರಾತುಗಳ ಕುಸಿತಕ್ಕೆ ಕಾರಣ ವಾಗುವ ಮೂಲಕ ಪತ್ರಿಕೆಗಳ ಹಣಕಾಸು ಸ್ಥಿತಿಯನ್ನು ಹದಗೆಡಿಸಿದೆ ಎಂದು ಹೇಳಿರುವ ಇಂಂಡಿಯನ್ ನ್ಯೂಸ್‌ಪೇಪರ ಸೊಸೈಟಿ(ಐಎನ್‌ಎಸ್)ಯು, ಪತ್ರಿಕೋದ್ಯಮವನ್ನು ಬೆಂಬಲಿಸುವಂತೆ ಮತ್ತು ಅದನ್ನು ಬಲಗೊಳಿಸುವಂತೆ ಸರಕಾರವನ್ನು ಆಗ್ರಹಿಸಿದೆ.

ಮಾಧ್ಯಮ ಕಚೇರಿಗಳು ಮತ್ತು ಪತ್ರಕರ್ತರ ಮೇಲೆ ದಾಳಿ ಮತ್ತು ಹಿಂಸಾಚಾರದ ಘಟನೆಗಳನ್ನು ಖಂಡಿಸಿರುವ ಅದು, ನಿಸ್ಸಂಶಯವಾಗಿ ಇವು ಪತ್ರಿಕಾ ಸ್ವಾತಂತ್ರಕ್ಕೆ ಗಂಭೀರ ಬೆದರಿಕೆಗಳಾಗಿವೆ ಎಂದು ಹೇಳಿದೆ.

ಪತ್ರಕರ್ತರು ಮತ್ತು ಪತ್ರಕರ್ತರಲ್ಲದವರಿಗೆ ಇನ್ನಷ್ಟು ವೇತನ ಮಂಡಳಿಗಳನ್ನು ರಚಿಸುವುದರಿಂದ ದೂರವಿರುವಂತೆ ಸರಕಾರವನ್ನು ಕೋರಿಕೊಂಡಿರುವ ಐಎನ್‌ಎಸ್, ಇಂತಹ ಪದ್ಧತಿ ಬೇರೆ ಯಾವುದೇ ಉದ್ಯಮದಲ್ಲಿಲ್ಲ ಎಂದು ತಿಳಿಸಿದೆ.

 ಇಲ್ಲಿ ನಡೆದ 78ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಐಎನ್‌ಎಸ್ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸುತ್ತಿರುವ ಸೋಮೇಶ ಶರ್ಮಾ ಅವರು, ಭಾರತೀಯ ವೃತ್ತಪತ್ರಿಕೆಗಳ ಉದ್ಯಮವು ಜಾಹೀರಾತು ಆದಾಯವನ್ನೇ ಬಲವಾಗಿ ನೆಚ್ಚಿಕೊಂಡಿದೆ ಮತ್ತು ನೋಟು ಅಮಾನ್ಯ ಕ್ರಮವು ಹೆಚ್ಚುಕಡಿಮೆ ಎಲ್ಲ ವರ್ಗಗಳ ಜಾಹೀರಾತುದಾರರ ವೆಚ್ಚಗಳಿಗೆ ಕಡಿವಾಣ ಹಾಕುವ ಮೂಲಕ ಪತ್ರಿಕೆಗಳ ಹಣಕಾಸು ಸ್ಥಿತಿಯನ್ನು ಕುಲಗೆಡಿಸಿದೆ ಎಂದು ಹೇಳಿದರು.

ಸಾಮಾನ್ಯ ಮಾಧ್ಯಮಗಳು ಮತ್ತು ವೃತ್ತಪತ್ರಿಕೆಗಳು ಹಣಕಾಸು ಮುಗ್ಗಟ್ಟಿನಲ್ಲಿವೆ. ಅವುಗಳನ್ನು ತೆರಿಗೆಗಳಿಗೆ ಒಳಪಡಿಸುವ ಮತ್ತು ಅವುಗಳ ಆದಾಯ ಮಾರ್ಗಗಳ ಮೇಲೆ ದಾಳಿ ನಡೆಸುವ ಬದಲು ಸರಕಾರವು ಅವುಗಳನ್ನು ಬೆಂಬಲಿಸಿ ಸಬಲಗೊಳಿಸಬೇಕಿದೆ ಎಂದ ಅವರು, ‘ನ್ಯಾಯಯುತ’ ಹಣಕಾಸು ಮತ್ತು ಕಾರ್ಮಿಕ ನೀತಿಗಳಿಗಾಗಿ ಐಎನ್‌ಎಸ್ ಸರಕಾರದ ಬೆನ್ನ ಹಿಂದೆ ಬಿದ್ದಿದೆ ಎಂದು ತಿಳಿಸಿದರು.

 ಸಮಾಜ ವಿರೋಧಿ ಶಕ್ತಿಗಳಿಂದ ಪತ್ರಕರ್ತರ ಮೇಲಿನ ದಾಳಿಗಳನ್ನು ಖಂಡಿಸಿದ ಅವರು, ಪತ್ರಿಕಾರಂಗದ ಸುರಕ್ಷತೆ ಮತ್ತು ರಕ್ಷಣೆಗಾಗಿ ಇಂತಹ ಘಟನೆಗಳನ್ನು ಕಠಿಣವಾಗಿ ನಿರ್ವಹಿಸುವಂತೆ ರಾಜ್ಯ ಸರಕಾರಗಳು ಹಾಗೂ ಸ್ಥಳೀಯ ಕಾನೂನು ಮತ್ತು ಸುವ್ಯವಸ್ಥೆ ಜಾರಿ ಅಧಿಕಾರಿಗಳನ್ನು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News