ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಸಿಎಂ ಸಭೆ ಅಪೂರ್ಣ
ಬೆಂಗಳೂರು, ಸೆ.15: ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರು ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆ ಅಪೂರ್ಣವಾಗಿದ್ದು, ಸೆ.19ರಂದು ಬೆಳಗ್ಗೆ 11ಕ್ಕೆ ಮುಂದೂಡಲಾಗಿದೆ.
ಶುಕ್ರವಾರ ಸಂಜೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನಪರಿಷತ್‌ನ 10ಕ್ಕೂ ಹೆಚ್ಚು ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಮಾತುಕತೆ ನಡೆಸಿದರು. ಸಂಜೆ 4ರಿಂದ 7.30ರವರೆಗೆ ನಡೆದ ಸಭೆ ಅಪೂರ್ಣದೊಂದಿಗೆ ಮುಕ್ತಾಯವಾಗಿದೆ.
ಸಭೆಯ ನಂತರ ವಿಧಾನ ಪರಿಷತ್‌ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ನಿವಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆ ಅಪೂರ್ಣವಾಗಿದ್ದರೂ ಉತ್ತಮ ಚರ್ಚೆ ನಡೆದಿದೆ. ಹಲವು ಸಮಸ್ಯೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಮುಖ್ಯವಾಗಿ ಪ್ರಾಥಮಿಕ, ಪ್ರೌಢಶಿಕ್ಷಣ ಶಾಲೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದು, ಅನುದಾನಿತ ಶಾಲೆಗಳಿಗೆ ತಡೆಹಿಡಿದಿರುವ ಅನುದಾನ ಕೊಡುವುದು ಸೇರಿದಂತೆ ಹಲವಾರು ಅಂಶಗಳ ಕುರಿತು ಪೂರಕವಾಗಿದ್ದಾರೆ. ಸೆ.19ರಂದು ನಡೆಯುವ ಮತ್ತೊಂದು ಸಭೆಯಲ್ಲಿ ಉಳಿದ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ, ಅಲ್ಲಿಯವರೆಗೆ ಯಥಾರೀತಿ ನಮ್ಮ ಅಹೋರಾತ್ರಿ ಧರಣಿ ಮುಂದುವರೆಯಲಿದೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯರು ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ದೊಡ್ಡ ಪಟ್ಟಿಯನ್ನು ಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಂದು ನಡೆದ ಸಭೆ ಅಪೂರ್ಣವಾದರು ಯಶಸ್ವಿಯಾಗಿದೆ. ಹಲವು ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ. ಕೆಲವು ಸಮಸ್ಯೆಗಳನ್ನು ಈಡೇರಿಕೆಯ ಕುರಿತು ಆರ್ಥಿಕ ಇಲಾಖೆಯ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಹೀಗಾಗಿ ಸೆ.19ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ವಿಧಾನಪರಿಷತ್ ಸದಸ್ಯರು ನಡೆಸುತ್ತಿರುವ ಅಹೋರಾತ್ರಿ ಧರಣಿಯನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.
-ತನ್ವೀರ್ ಸೇಠ್ , ಸಚಿವ ಪ್ರಾಥಮಿಕ ಶಿಕ್ಷಣ ಇಲಾಖೆ