ಸೈನಡ್ ಮಲ್ಲಿಕಾಗೆ ಗಲ್ಲು ಶಿಕ್ಷೆ ರದ್ದು: ಹೈಕೋರ್ಟ್
ಬೆಂಗಳೂರು, ಸೆ.15: ದೊಡ್ಡಬಳ್ಳಾಪುರದ ನಾಗಲಕ್ಷ್ಮೀ ಕೊಲೆ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೈನೆಡ್ ಮಲ್ಲಿಕಾಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ದೊಡ್ಡಬಳ್ಳಾಪುರದ ನಾಗಲಕ್ಷ್ಮೀ ಕೊಲೆ ಹಾಗೂ ದರೋಡೆ ಪ್ರಕರಣ ಸಂಬಂಧ ಆರೋಪಿ ಸೈನೆಡ್ ಮಲ್ಲಿಕಾಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆ ಖಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮತ್ತು ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ಸೈನೆಡ್ ಮಲ್ಲಿಕಾ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳೀಮಠ ಮತ್ತು ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠವು ಗಲ್ಲು ಶಿಕ್ಷೆಯನ್ನು ರದ್ದುಪಡಿಸಿ, ಪ್ರಕರಣದ ಮರು ವಿಚಾರಣೆ ನಡೆಸಲು ಅಧೀನ ನ್ಯಾಯಾಲಯಕ್ಕೆ ಸೂಚಿಸಿದೆ.
ಕೊಲೆಯಾದ ನಾಗಲಕ್ಷ್ಮೀ ಅವರ ಮೃತದೇಹವನ್ನು ವೈದ್ಯರು ಪರೀಕ್ಷೆ ನಡೆಸದೆ ಮೃತದೇಹವನ್ನು ಸಂಬಂಧಿಕರಿಗೆ ನೀಡಿದ್ದಾರೆ. ಅಲ್ಲದೆ, ಅಧೀನ ನ್ಯಾಯಾಲಯ ಮಲ್ಲಿಕಾಗೆ ಏಕಾಏಕಿ ಗಲ್ಲು ಶಿಕ್ಷೆ ವಿಧಿಸಿದೆ. ಹೀಗಾಗಿ, ಈ ಪ್ರಕರಣವನ್ನು ಅಧೀನ ನ್ಯಾಯಾಲಯ ಮರು ವಿಚಾರಣೆ ನಡೆಸಿ, ಮೂರು ತಿಂಗಳ ಒಳಗೆ ವಿಚಾರಣೆ ಪೂರ್ಣಗೊಳಿಸಲು ನಿರ್ದೇಶಿಸಿದೆ.
2007ರ ಡಿಸೆಂಬರ್ 18ರಂದು ದೊಡ್ಡಬಳ್ಳಾಪುರದಲ್ಲಿ ನಾಗಲಕ್ಷ್ಮೀ ಅವರನ್ನು ಅವರ ಮನೆಯಲ್ಲಿಯೇ ಕತ್ತು ಹಿಸುಕಿ ಕೊಲೆ ಮಾಡಿ, ದರೋಡೆ ಮಾಡಲಾಗಿತ್ತು. ಹೀಗಾಗಿ, ಮೃತರ ಸಂಬಂಧಿ ಗೋವಿಂದಶೆಟ್ಟಿ ಅವರು ದೊಡ್ಡಬಳ್ಳಾಪುರ ಠಾಣಾದಲ್ಲಿ ದೂರು ನೀಡಿರುತ್ತಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಆರೋಪಿ ಮಲ್ಲಿಕಾ ವಿರುದ್ಧ ಕಾನೂನು ಕ್ರಮ ಜರಗಿಸಿರುತ್ತಾರೆ.