×
Ad

ಗೌರಿ ಲಂಕೇಶ್ ಹತ್ಯೆ ಪ್ರಕರಣ: ರಾಘವೇಶ್ವರ ಶ್ರೀ ಕೈವಾಡ ಶಂಕೆ, ದೂರು

Update: 2017-09-16 20:31 IST

ಬೆಂಗಳೂರು, ಸೆ.16: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಕೈವಾಡ ಇರುವುದಾಗಿ ಶಂಕೆ ವ್ಯಕ್ತಪಡಿಸಿ ಪ್ರೇಮಲತಾ ದಿವಾಕರ್ ಶಾಸ್ತ್ರಿ ದಂಪತಿ ಸಿಟ್ ತನಿಖಾಧಿಕಾರಿಗಳಿಗೆ ದೂರು ನೀಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

ಗೌರಿ ಲಂಕೇಶ್ ಅವರ ಹತ್ಯೆ ನಡೆದ ಮೂರು ದಿನಗಳ ಬಳಿಕ ರಾಘವೇಶ್ವರ ಶ್ರೀ ವಿರುದ್ಧ ಪ್ರೇಮಲತಾ ದಿವಾಕರ್ ಶಾಸ್ತ್ರಿ ದಂಪತಿ ವಿಶೇಷ ತನಿಖಾ ದಳ ತನಿಖಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ.

ಪ್ರಕರಣದಲ್ಲಿ ರಾಘವೇಶ್ವರ ಶ್ರೀ ವಿರುದ್ಧ ಅನುಮಾನ ವ್ಯಕ್ತಪಡಿಸಿರುವ ದಂಪತಿ, ರಾಘವೇಶ್ವರ ವಿರುದ್ದ 500 ಪುಟಕ್ಕೂ ಹೆಚ್ಚು ದಾಖಲೆ ನೀಡಿರುವುದಾಗಿ ತಿಳಿದು ಬಂದಿದೆ.

ಗೌರಿ ಲಂಕೇಶ್ ಅವರ ಪತ್ರಿಕೆಯಲ್ಲಿ ರಾಘವೇಶ್ವರ ಶ್ರೀ ವಿರುದ್ಧ ಸುದ್ದಿ ಪ್ರಕಟ ಮಾಡಿದ್ದರು. ಇದರಿಂದಲೇ ಅವರ ಕೊಲೆಯಾಗಿದೆ ಎಂದು ಶಂಕೆ ವ್ಯಕ್ತಪಡಿಸಿ ಪ್ರೇಮಲತಾ ದಿವಾಕರ್ ಶಾಸ್ತ್ರಿ ದಂಪತಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರೇಮಲತಾ ದಿವಾಕರ್ ದಂಪತಿ ನೀಡಿದ ದಾಖಲೆಗಳನ್ನು ಸಿಟ್ ಪರಿಶೀಲಿಸುತ್ತಿದೆ. ಅಲ್ಲದೆ, 10 ದಿನದಲ್ಲಿ ಸಿಟ್ ತನಿಖಾಧಿಕಾರಿಗಳಿಗೆ ಬಂದಿದ್ದ ಸಲಹಾ ಕರೆಗಳಲ್ಲೂ ರಾಘವೇಶ್ವರ ಶ್ರೀ ಮೇಲೆ ಕೆಲವರು ಅನುಮಾನ ವ್ಯಕ್ತಪಡಿಸಿರುವುದ ಹೇಳಲಾಗುತ್ತಿದೆ.

ವಶಕ್ಕೆ ಪಡೆದು ವಿಚಾರಣೆ ನಡೆಸಿ:

ಗೌರಿ ಲಂಕೇಶ್ ಅವರು ರಾಘವೇಶ್ವರ ಶ್ರೀ ವಿರುದ್ಧ ಹಲವು ಬಾರಿ ಸುದ್ದಿ ಪ್ರಕಟಿಸಿದ್ದರು. ಈ ಸಂಬಂಧ ರಾಘವೇಶ್ವರ ಸ್ವಾಮೀಜಿ, ತಮ್ಮ ಭಕ್ತರ ಮೂಲಕ ಗೌರಿ ಲಂಕೇಶ್‌ರಿಗೆ ಬಹಿರಂಗ ಬೆದರಿಕೆ ಹಾಕಿಸಿದ್ದರು. ಹೀಗಾಗಿ, ಪ್ರೇಮಲತಾ ದಿವಾಕರ್ ಶಾಸ್ತ್ರಿ ದಂಪತಿ ನೀಡಿರುವ ದೂರಿನ ಅನ್ವಯ ರಾಘವೇಶ್ವರ ಶ್ರೀನನ್ನು ವಶಕ್ಕೆ ಪಡೆದು ಸಿಟ್ ತನಿಖಾಧಿಕಾರಿಗಳು ವಿಚಾರಣೆ ನಡೆಸಬೇಕು.

-ಕೆ.ಎಸ್. ವಿಮಲಾ, ಮಹಿಳಾ ಹೋರಾಟಗಾರ್ತಿ

ಪಾತಕಿಗಳ ಜತೆ ರಾಘವೇಶ್ವರ ಶ್ರೀ ನಂಟು?
ಯೋಗೇಶ್ ಯಾನೆ ಕಲಿ ಯೋಗೇಶ್ ಸೇರಿ ಇನ್ನಿತರೆ ಭೂಗತ ಪಾತಕಿಗಳ ಜತೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಸ್ವಾಮೀಜಿ ನಂಟು ಹೊಂದಿರುವುದಲ್ಲದೆ, ಈ ಹಿಂದೆ ದೂರನ್ನು ಹಿಂಪಡೆಯುವಂತೆ ಯೋಗೇಶ್ ಬೆದರಿಕೆ ಕರೆ ಮಾಡಿದ್ದ ಸಂಬಂಧ ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದ್ದೆವು ಎಂದು ಗಾಯಕಿ ಪ್ರೇಮಲತಾ ಹಾಗೂ ದಿವಾಕರ್ ಶಾಸ್ತ್ರಿ ದಂಪತಿ ಸಿಟ್ ತನಿಖಾಧಿಕಾರಿಗಳಿಗೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಈಗ ಗೌರಿ ಲಂಕೇಶ್ ಅವರ ಹತ್ಯೆ ನಡೆದಿದ್ದು, ಇದರ ಹಿಂದೆ ಶ್ರೀಗಳ ಕೈವಾಡವಿರುವ ಬಗ್ಗೆ ಅನುಮಾನವಿದೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕೆಂದು ದಂಪತಿ ಕೋರಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News