‘ಮೌಢ್ಯ ನಿಷೇಧ ವಿಧೇಯಕ’ ಮುಂದಿನ ಅಧಿವೇಶನದಲ್ಲಿ ಮಂಡನೆ: ಸಿಎಂ ಸಿದ್ದರಾಮಯ್ಯ

Update: 2017-09-16 15:12 GMT

ಹೊಸದಿಲ್ಲಿ, ಸೆ.16: ಮೌಢ್ಯ ನಿಷೇಧ ವಿಧೇಯಕವನ್ನು ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶನಿವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ಮೌಢ್ಯ ನಿಷೇಧ ಕಾಯ್ದೆ ಬಗ್ಗೆ ಮಾಹಿತಿ ಪಡೆಯಲಾಗಿದೆ. ನವೆಂಬರ್‌ನಲ್ಲಿ ನಡೆಯುವ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸುವ ಚಿಂತನೆ ನಡೆದಿದೆ ಎಂದರು.

ಟಿವಿಗಳಲ್ಲಿ ಜ್ಯೋತಿಷ್ಯ ತೋರಿಸಬೇಡಿ ಎಂದು ಹೇಳಲು ಆಗುವುದಿಲ್ಲ. ಆದರೆ, ಜನರಿಗೆ ಇಂತಹ ವಿಚಾರಗಳನ್ನು ನಂಬಬೇಡಿ, ಅವರು ಹೇಳುವುದನ್ನು ಪಾಲನೆ ಮಾಡಬೇಡಿ ಎಂದಷ್ಟೇ ನಾವು ಜಾಗೃತಿ ಮೂಡಿಸಬಹುದು ಎಂದು ಹೇಳಿದರು.

ರಾಜ್ಯ ಬಿಜೆಪಿ ನಾಯಕರು ರಾಜ್ಯ ಸರಕಾರ ಹಾಗೂ ಸಚಿವರ ವಿರುದ್ಧ ಹಮ್ಮಿಕೊಂಡಿರುವ ಹೋರಾಟವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಮೆಚ್ಚಿಸಲೆ ಹೊರತು, ಯಾವುದೇ ಸೈದ್ಧಾಂತಿಕ ನಿಲುವು ಅವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸೈದ್ಧಾಂತಿಕ ನಿಲುವು ಜನರ ಕಷ್ಟ ನಿವಾರಿಸುವ ಕಡೆ ಇರುತ್ತದೆ. ಅದು ಬಿಜೆಪಿ ನಾಯಕರಿಗೆ ಇಲ್ಲ. ರಾಮ ಮಂದಿರ, ಹಿಂದೂ ರಾಷ್ಟ್ರ ನಿರ್ಮಾಣದ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದರೆ ಅದನ್ನು ಸೈದ್ಧಾಂತಿಕ ನಿಲುವು ಎನ್ನಲಾಗದು ಎಂದು ಕಿಡಿಗಾರಿದರು.

ನೀವು ಎಷ್ಟು ಸಲ ಜೈಲಿಗೆ ಹೋಗಿದ್ದೀರಿ, ಎಷ್ಟು ಪ್ರಕರಣಗಳು ನಿಮ್ಮ ಮೇಲೆ ಬಿದ್ದಿವೆ, ಎಷ್ಟು ಲಾಠಿ ಎಟು ತಿಂದಿದ್ದೀರಾ ಎಂದು ಅಮಿತ್ ಶಾ ರಾಜ್ಯದ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ ಅಂತ ಮಾಧ್ಯಮಗಳಲ್ಲಿ ವರದಿಯಾಗಿದೆ. ಪಕ್ಷದ ಅಧ್ಯಕ್ಷ ಪ್ರಶ್ನೆ ಮಾಡೋ ರೀತಿಯೇ ಇದು? ಅಮಿತ್ ಶಾ ಮೆಚ್ಚಿಸಲಿಕ್ಕೆ ಬಿಜೆಪಿ ನಾಯಕರು ಇಂತಹ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಎಸ್ಸಿ-ಎಸ್ಟಿ ಭಡ್ತಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನವೆಂಬರ್‌ನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಕಾನೂನು ರೂಪಿಸಲಾಗುವುದು. ಸದ್ಯಕ್ಕೆ ರಾಷ್ಟ್ರಪತಿ ಜೊತೆ ಈ ವಿಚಾರದ ಕುರಿತು ಯಾವುದೇ ಚರ್ಚೆ ಮಾಡಿಲ್ಲ. ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲನೆ ಮಾಡಲು ಡಿಸೆಂಬರ್‌ವರೆಗೆ ಸಮಯವಿದೆ ಎಂದು ಹೇಳಿದರು.

ನವೆಂಬರ್‌ನಲ್ಲಿ ನಡೆಯುವ ವಿಧಾನ ಮಂಡಲದ ಅಧಿವೇಶನದಲ್ಲಿ ಕಾನೂನು ಮಾಡಲಾಗುವುದು. ಕಾನೂನು ಮಾಡುವ ಅಧಿಕಾರ ಶಾಸನಸಭೆಗಿದೆ ಎಂದು ಮುಖ್ಯಮಂತ್ರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿರ್ಮಲಾ ಸೀತಾರಾಮನ್ ಭೇಟಿ: ರಸ್ತೆ ವಿಸ್ತರಣೆ, ಮೆಟ್ರೋ ಮತ್ತಿತರ ಅಭಿವೃದ್ಧಿ ಕೆಲಸಗಳಿಗೆ ರಕ್ಷಣಾ ಇಲಾಖೆಗೆ ಸೇರಿದ ಜಾಗ ಬೇಕಿದೆ. ಇದಕ್ಕಾಗಿ ರಕ್ಷಣಾ ಇಲಾಖೆಯ 67 ಎಕರೆ ಜಾಗ ಗುರುತಿಸಲಾಗಿದೆ. ಅದನ್ನು ರಾಜ್ಯ ಸರಕಾರಕ್ಕೆ ನೀಡುವಂತೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಮಾಡಿದ್ದೇ ಎಂದು ಸಿದ್ದರಾಮಯ್ಯ ಹೇಳಿದರು.

ರಕ್ಷಣಾ ಇಲಾಖೆಯ 67 ಎಕರೆ ಜಾಗದ ಬದಲು ಆನೇಕಲ್ ಬಳಿ 207 ಎಕರೆ ಜಾಗ ನೀಡುವುದಾಗಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅಲ್ಲದೆ, ರಕ್ಷಣಾ ಇಲಾಖೆ ನಮಗೆ ನೀಡುವ ಜಮೀನಿಗೆ ಮಾರುಕಟ್ಟೆ ದರವನ್ನು ನಿಗದಿ ಮಾಡದಂತೆ ಕೇಳಿಕೊಂಡಿದ್ದೇನೆ ಎಂದರು.

ನಿರ್ಮಲಾ ಸೀತಾರಾಮನ್ ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಸಾರ್ವಜನಿಕರ ಉಪಯೋಗಕ್ಕಾಗಿ ಅಗತ್ಯವಿರುವ ಜಾಗವನ್ನು ಅವರು ಕೊಡುತ್ತಾರೆ ಎಂಬ ವಿಶ್ವಾಸವಿದೆ. ಅಲ್ಲದೆ, ದಸರಾ ಸಂದರ್ಭದಲ್ಲಿ ಸೆ.21ರಿಂದ 27ರವರೆಗೆ ವೈಮಾನಿಕ ಪ್ರದರ್ಶನ ಆಯೋಜಿಸುವಂತೆಯೂ ಅವರಿಗೆ ಮನವಿ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News