×
Ad

ರಾಜಕಾಲುವೆಯ ಹೂಳು ತೆಗೆಯಲು ರೋಬೋಟಿಕ್ ಯಂತ್ರ ಖರೀದಿ: ಸಚಿವ ಕೆ.ಜೆ.ಜಾರ್ಜ್

Update: 2017-09-16 21:43 IST

ಬೆಂಗಳೂರು, ಸೆ.16: ರಾಜಕಾಲುವೆಯಲ್ಲಿ ಹೂಳು ತೆಗೆಯಲು ವಲಯಕ್ಕೆ ಒಂದರಂತೆ ರೋಬೋಟಿಕ್ ಯಂತ್ರವನ್ನು ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಶನಿವಾರ ನಗರದ ಹೊಸಕೆರೆಹಳ್ಳಿಯ ಕೆಇಬಿ ವೃತ್ತದಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಾಣಗೊಂಡಿರುವ 17.82 ಕೋಟಿ ರೂ ವೆಚ್ಚದ ಮೇಲ್ಸೇತುವೆಯನ್ನು ಸಚಿವ ಕೆ.ಜೆ. ಜಾರ್ಜ್ ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದರು.

ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯಲು ಅಡ್ಡಗಾಲು ಆಗುತ್ತಿರುವ ಹೂಳನ್ನು ಸಮರ್ಪಕವಾಗಿ ಹೊರ ತೆಗೆಯಲು ರೋಬೋಟಿಕ್ ಯಂತ್ರಗಳನ್ನು ಬಳಸಲಾಗುವುದು. ಇದಕ್ಕಾಗಿ ವಲಯಕ್ಕೆ ಒಂದರಂತೆ ನಾಲ್ಕು ರೋಬೋಟಿಕ್ ಯಂತ್ರಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ನಗರದಲ್ಲಿ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಶತಮಾನದ ದಾಖಲೆಯ ಮಳೆಯಾಗಿದೆ. ಹಾಗಾಗಿ ಕೆಲವು ಬಡಾವಣೆಗಳಲ್ಲಿ ಜನರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ನೆರೆ ಪ್ರದೇಶಗಳಲ್ಲಿ ಶಾಶ್ವತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಗರದ ಸುಮಾರು 400 ಕಿ.ಮೀ ಉದ್ದದ ಕಾಲುವೆಗಳಲ್ಲಿ ಕಾಂಕ್ರೀಟ್ ಕಾಮಗಾರಿ ಭರದಿಂದ ಸಾಗಿದೆ. 2020ರ ವೇಳೆಗೆ ನಗರದ ತ್ಯಾಜ್ಯ ನೀರು ಸಂಪೂರ್ಣ ಸಂಸ್ಕರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಕಾಮಗಾರಿಗಳು ಆರಂಭವಾಗಲಿದೆ. ನಗರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನೀಲನಕ್ಷೆಗೆ ಅನುಗುಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಟ್ಯಂತರ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ ಎಂದು ತಿಳಿಸಿದರು.

ಆರೋಪ ಸುಳ್ಳು: ನಗರದ ಅಭಿವೃದ್ಧಿಗೆ ಸಾಕಷ್ಟು ಹಣ ನೀಡಲಾಗಿದೆ. ಅಭಿವೃದ್ಧಿಯನ್ನು ಸಹಿಸದ ಕೆಲವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಕಿಕ್ ಬ್ಯಾಕ್ ಪಡೆದಿದ್ದೇವೆ ಎಂದು ಆಧಾರರಹಿತವಾಗಿ ಆರೋಪಿಸಿದ್ದಾರೆ. ಇದೆಲ್ಲ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಬಿಬಿಎಂಪಿ ಮೇಯರ್ ಪದ್ಮಾವತಿ ಸೇರಿದಂತೆ ಇತರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News