×
Ad

ಪೊಲೀಸರು ಯೋಧರಂತೆ ಕರ್ತವ್ಯ ನಿರ್ವಹಿಸಬೇಕು: ರಾಜ್ಯಪಾಲ ವಜುಭಾಯಿ ವಾಲ

Update: 2017-09-16 21:48 IST

ಬೆಂಗಳೂರು, ಸೆ. 16: ಗಡಿಯಲ್ಲಿ ದೇಶ ಕಾಯುವ ಯೋಧರ ರೀತಿಯಲ್ಲಿ ಪೊಲೀಸರು ರಾಷ್ಟ್ರ, ರಾಜ್ಯ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸಬೇಕು. ತಮ್ಮ ಕರ್ತವ್ಯ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅನೈತಿಕ ಚಟುವಟಿಕೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು ಎಂದು ರಾಜ್ಯಪಾಲ ವಜುಬಾಯಿ ವಾಲ ಸಲಹೆ ನೀಡಿದ್ದಾರೆ.

ಶನಿವಾರ ರಾಜಭವನದ ಗಾಜಿನ ಮನೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೊಲೀಸರಿಗೆ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪೊಲೀಸರು ದಕ್ಷತೆಯಿಂದ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಗೃಹ ಇಲಾಖೆ ಮತ್ತು ರಾಜ್ಯ ಸರಕಾರದ ಘನತೆ ಹಾಗೂ ಗೌರವ ಹೆಚ್ಚುತ್ತದೆ ಎಂದರು.

ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಣೆ ನೀಡುವುದು ಪೊಲೀಸರ ಕೆಲಸ. ಅದರಂತೆ ಜನಸಾಮಾನ್ಯರು ಪೊಲೀಸರ ಕರ್ತವ್ಯ ನಿರ್ವಹಿಸುತ್ತಾರೆ ಎಂಬುದನ್ನು ಅರಿತು ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಹಕರಿಸಬೇಕು ಎಂದ ಅವರು, ಭ್ರಷ್ಟಾಚಾರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ದೇಶ ಸೇವೆಯನ್ನು ಪ್ರಾಮಾಣಿಕತೆಯಿಂದ ಮಾಡುವುದಾಗಿ ಪೊಲೀಸರು ಪಣತೊಡಬೇಕು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸಮಾಜದ ಶಾಂತಿ, ಸುವ್ಯವಸ್ಥೆಗೆ ಭಂಗ ತರುವ ಸಮಾಜಘಾತುಕರಿಗೆ ಕಾನೂನು ರೀತಿ ಶಿಕ್ಷೆ ಕೊಡಿಸುವುದು ಮತ್ತು ಸಮಾಜಘಾತುಕರಿಂದ ಜನಸಾಮಾನ್ಯರಿಗೆ ತೊಂದರೆಯಾಗದ ರೀತಿ ರಕ್ಷಣೆ ನೀಡುವುದು ಸರಕಾರದ ಮತ್ತು ಪೊಲೀಸರ ಕೆಲಸ. ಹೀಗಾಗಿ, ಪೊಲೀಸರು ಪ್ರಾಮಾಣಿಕತೆಯಿಂದ ಕ್ಷಿಪ್ರಗತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ತಮ್ಮ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕತೆಯಿಂದ ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ವಿಶಿಷ್ಟ ಸೇವಾ ಪದಕಕ್ಕೆ ರಾಜ್ಯ ಸರಕಾರವೇ ರಾಷ್ಟ್ರಪತಿಗೆ ಶಿಫಾರಸು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಆಯಾ ವರ್ಷವೇ ರಾಷ್ಟ್ರಪತಿಗಳ ಪದಕ ಪ್ರದಾನ ಸಮಾರಂಭ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರಕಾರವು ಪೊಲೀಸರಿಗೆ ವಸತಿ, ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೇವೆಗಳನ್ನು ಕಲ್ಪಿಸಿದ್ದು, 18 ವರ್ಷ ಸೇವೆ ಪೂರೈಸಿದವರಿಗೆ ಭಡ್ತಿ ನೀಡುವ ಮೂಲಕ ಕರ್ತವ್ಯದಲ್ಲಿ ಮತ್ತಷ್ಟು ಕಾರ್ಯ ತತ್ಪರತೆ ಮೂಡಿಸಲಾಗಿದ್ದು, ಈ ನಿಟ್ಟಿನಲ್ಲಿ 11ಸಾವಿರ ಪೊಲೀಸರಿಗೆ ಭಡ್ತಿ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಸ್‌ಚಂದ್ರ ಕುಂಠಿ, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸುಭಾಸ್‌ಚಂದ್ರ, ಡಿಜಿ ಮತ್ತು ಐಜಿ ರೂಪಕ್‌ಕುಮಾರ್ ದತ್ತ ಸೇರಿ ಹಲವರು ಉಪಸ್ಥಿತರಿದ್ದರು.

ಈ ವೇಳೆ ಧೀರ್ಘಕಾಲದ ಪೊಲೀಸ್ ಸೇವೆಯಲ್ಲಿ ಅಸಾಧಾರಣ, ದಕ್ಷತೆ ಮತ್ತು ಅರ್ಪಣ ಮನೋಭಾವವನ್ನು ಪ್ರದರ್ಶಿಸಿದ ಪೊಲೀಸ್ ಅಧಿಕಾರಿಗಳಿಗೆ ನೀಡುವ ರಾಷ್ಟ್ರಪತಿಗಳ ಪೊಲೀಸ್ ಶಿಷ್ಟ ಸೇವಾ ಪದಕವನ್ನು 2014 ನೇ ಸಾಲಿಗೆ 3, 2015 ನೇ ಸಾಲಿಗೆ 7 ಮತ್ತು 2016 ನೇ ಸಾಲಿಗೆ 3 ಜನರಿಗೆ ಪದಕ ಪ್ರದಾನ ಮಾಡಲಾಯಿತು. ಅಲ್ಲದೆ, 20 ವರ್ಷ ಸೇವೆಯನ್ನು ಪೂರೈಸಿ ಉತ್ತಮ ಸಾಧನೆ ಪ್ರದರ್ಶಿಸಿದ 2014 ನೇ ಸಾಲಿಗೆ 17 ಮಂದಿ, 2015 ನೇ ಸಾಲಿಗೆ 38 ಮಂದಿ ಹಾಗೂ 2016 ನೇ ಸಾಲಿಗೆ 20 ಜನರಿಗೆ ಶ್ಲಾಘನೀಯ ಸೇವಾ ಪದಕ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News