ಸಂವಿಧಾನದ 8ನೆ ಪರಿಚ್ಛೇದಕ್ಕೆ ತುಳು ಭಾಷೆ ಸೇರಲು ಹೋರಾಟ ಅಗತ್ಯ: ಡಿ.ಕೆ.ಚೌಟ
ಬೆಂಗಳೂರು, ಸೆ.16: ತುಳು ಭಾಷೆಯನ್ನು ಸಂವಿಧಾನದ 8ನೆ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ರಾಜ್ಯದ ಜನ ಪ್ರತಿನಿಧಿಗಳು ಒಟ್ಟಾಗಿ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಹಿರಿಯ ರಂಗಕರ್ಮಿ ಡಿ.ಕೆ.ಚೌಟ ತಿಳಿಸಿದ್ದಾರೆ.
ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಕನ್ನಡ ಮತ್ತು ತುಳು ಭಾಷೆ ಅಕ್ಕ ತಂಗಿಯರು ಇದ್ದಂತೆ. ಎರಡು ಭಾಷೆಗಳು ಪರಸ್ಪರ ಗೌರವಿಸುತ್ತಾ, ಬೆಂಬಲಿಸುತ್ತಾ ಬೆಳೆಯುವ ರೀತಿಯಲ್ಲಿ ನಾಡಿನ ಜನತೆಯ ಮನಸ್ಥಿತಿ ರೂಪಗೊಳ್ಳಬೇಕು ಎಂದು ತಿಳಿಸಿದರು.
ಕೆಲವು ತುಳುನಾಡಿನ ಬಿಸಿ ರಕ್ತದ ಯುವಕರು ತುಳು ನಾಡು ಪ್ರತ್ಯೇಕವಾಗಬೇಕೆಂದು ಕೂಗು ಹಾಕುತ್ತಾರೆ. ಆದರೆ, ತುಳು ಪ್ರತ್ಯೇಕವಾಗುವ ಅಗತ್ಯತೆ ಖಂಡಿತವಾಗಿಯೂ ಇಲ್ಲ. ತುಳು ಭಾಷೆಗೆ, ನಾಡಿಗೆ ಕೆಲವೊಂದು ಸ್ಥಾನಮಾನ ಸಿಗಬೇಕಾಗಿದೆ. ಅದಕ್ಕೆ ಕನ್ನಡ ನಾಡಿನ ಎಲ್ಲ ಜನರು ಹೋರಾಡಬೇಕಾಗಿದೆ. ಇದಕ್ಕೆ ಪೂರಕವಾಗಿ ತುಳು ಭಾಷೆಯನ್ನು ಸಂವಿಧಾನದ 8ನೆ ಪರಿಚ್ಛೇದಲ್ಲಿ ಸೇರಿಸುವ ನಿಟ್ಟಿನಲ್ಲಿ ಕನ್ನಡ ಜನತೆ ಹೋರಾಟ ಮಾಡುವ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಬೇಕಾಗಿದೆ ಎಂದು ಹೇಳಿದರು.
ತುಳು ಭಾಷೆಗೆ ಸಂವಿಧಾನದಲ್ಲಿ ಸ್ಥಾನಮಾನ ಸಿಗುವುದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕರು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ನನ್ನದೂ ಒಂದು ಪಾಲು ಇರಲೆಂದು ನನ್ನೆಲ್ಲಾ ಸಾಹಿತ್ಯವನ್ನು ತುಳು ಭಾಷೆಯಲ್ಲಿಯೇ ಬರೆಯುತ್ತಿದ್ದೇನೆ. ತುಳುವಲ್ಲಿ ಯೋಚಿಸುವುದನ್ನು ಕನ್ನಡ ಭಾಷೆಯಲ್ಲಿ ಬರೆಯುವ ಮೂಲಕ ಎರಡು ಭಾಷೆಗಳನ್ನು ಸಮಾನವಾಗಿ ಪ್ರೀತಿಸುತ್ತಿದ್ದೇನೆ ಎಂದರು.
ಹಾಗೆ ನೋಡಿದರೆ ನಾನು ಬಾಲ್ಯದಿಂದಲೇ ಸಾಹಿತ್ಯದ ರುಚಿ ಕಂಡವನು. 10ನೆ ವಯಸ್ಸಿನಲ್ಲಿಯೇ ನಾಡಿನ ಹಿರಿಯ ಸಾಹಿತಿಗಳಾದ ಗೋವಿಂದ ಪೈ ಮನೆಗೆ ಹೋಗುತ್ತಿದ್ದೆ. ಅವರ ಗ್ರಂಥಾಲಯದಲ್ಲಿ ಪುಸ್ತಕಗಳ ಮೇಲಿನ ದೂಳನ್ನು ಒರೆಸುತ್ತಾ ಪುಸ್ತಕಗಳ ರುಚಿ ಹತ್ತಿಸಿಕೊಂಡೆ. ಅವರ ಮನೆಗೆ ಬರುತ್ತಿದ್ದ ಹಿರಿಯ ಸಾಹಿತಿಗಳಾದ ಶಿವರಾಮ ಕಾರಂತ, ರಾಜರತ್ನಂ, ಡಿ.ವಿ.ಗುಂಡಪ್ಪರನ್ನು ಬಾಲ್ಯದಲ್ಲೇ ಕಂಡು ಪುಲಕಗೊಂಡು ಸಾಹಿತ್ಯ ಕ್ಷೇತ್ರವನ್ನು ಪ್ರೀತಿಸಲಾರಂಭಿಸಿದೆ ಎಂದು ಅವರು ಸಾಹಿತ್ಯಾಭಿರುಚಿಯನ್ನು ಬಿಚ್ಚಿಟ್ಟರು.
ನನ್ನ ಜೀವನದಲ್ಲಿ ಮೂಢನಂಬಿಕೆಗಳನ್ನು ದೂರವಿಟ್ಟಿದ್ದೇನೆ. ಇನ್ನು ದೇವರ ಮೇಲಿನ ನಂಬಿಕೆಯನ್ನು ಹೆಂಡತಿಗೆ ಬಿಟ್ಟುಕೊಟ್ಟು, ಜನತೆಯನ್ನು ನಂಬಿದ್ದೇನೆ. ಭಂಟರ ಸಂಘದ ಅಧ್ಯಕ್ಷನಾಗಿದ್ದ ವೇಳೆ ಕೆಲವರು ನೀವು ಜಾತಿಗೆ ಅಂಟಿಕೊಂಡಿದ್ದೀರ ಎಂದು ಪ್ರಶ್ನಿಸಿದರು. ಅವತ್ತಿನಿಂದ ಜಾತಿಯನ್ನೂ ಬಿಟ್ಟಿದ್ದೇನೆ ಎಂದು ಅವರು ತಿಳಿಸಿದರು.
ಇವತ್ತು ಕನ್ನಡ ರಂಗಭೂಮಿ ಪ್ರೋತ್ಸಾಹವಿಲ್ಲದೆ ಸೊರಗುತ್ತಿದೆ. ಇವತ್ತಿನ ಆಧುನಿಕ ಕಾಲಘಟ್ಟದಲ್ಲಿ ಕಾರ್ಪೊರೇಟ್ ವಲಯ ರಂಗಭೂಮಿಗೆ ಪ್ರೋತ್ಸಾಹ ನೀಡಬೇಕಾಗಿತ್ತು. ಹಿರಿಯ ಸಾಹಿತಿ ಹಾಗೂ ಉದ್ಯಮಿ ಸುಧಾಮೂರ್ತಿಯಾದರು ರಂಗಭೂಮಿಗೆ ಪ್ರೋತ್ಸಾಹ ನೀಡಬಹುದೆಂದು ನಿರೀಕ್ಷಿಸಿದ್ದೆ. ಅವರಿಗೂ ರಂಗಭೂಮಿಯತ್ತ ಆಕರ್ಷಣೆ ಇಲ್ಲವಾಗಿದೆ. ಹೀಗಾಗಿ ರಂಗಭೂಮಿಯ ತಂಡಗಳೇ ಕಾರ್ಪೊರೇಟ್ ಸಂಸ್ಥೆಗಳ ಸಹಕಾರ ಕೇಳುವುದರಲ್ಲಿ ತಪ್ಪಿಲ್ಲ. ಕಾರ್ಪೊರೇಟ್ ಸಂಸ್ಥೆಗಳ ಸಹಕಾರದಿಂದ ರಂಗಭೂಮಿ ಮತ್ತಷ್ಟು ವಿಭಿನ್ನತೆ ಪಡೆದುಕೊಳ್ಳಬಹುದೆಂದು ಅವರು ಆಶಿಸಿದರು.
ನಾನು ನೈಜೀರಿಯಾ ದೇಶದಲ್ಲಿ 25ವರ್ಷಗಳ ಸುದೀರ್ಘ ಕಾಲ ವಿದೇಶಿ ವಿನಿಮಯ ಉದ್ಯಮದಲ್ಲಿ ತೊಡಗಿದ್ದೆ. ಅಲ್ಲಿನ ಸಂಸ್ಕೃತಿ ಕಂಡು ಆಶ್ಚರ್ಯ ಚಕಿತನಾಗಿದ್ದೇನೆ, ಬೆರಗಾಗಿದ್ದೇನೆ. ಅಲ್ಲಿನ ಸಮಾಜ ಗಂಡು-ಹೆಣ್ಣಿಗೆ ಸಮಾನ ಸ್ಥಾನಮಾನ ನೀಡಿದೆ. ಮಹಿಳೆಯರಿಗೆ ಮುಕ್ತ ಸ್ವಾತಂತ್ರ ವಿದೆ. ಆದರೆ, ಎಲ್ಲಿಯೂ ಹೆಣ್ಣು ಮಕ್ಕಳ ಮೇಲೆ ಭಾರತದಲ್ಲಿ ನಡೆಯುವಂತೆ ವಿನಾಕಾರಣ ದೌರ್ಜನ್ಯ ನಡೆಯುವುದಿಲ್ಲ.
-ಡಿ.ಕೆ.ಚೌಟ ಹಿರಿಯ ರಂಗಕರ್ಮಿ