ತಂತ್ರಜ್ಞಾನದ ಸವಾಲುಗಳನ್ನು ಎದುರಿಸಿ ಸಿದ್ಧಗೊಂಡ ಕನ್ನಡದ ‘ಟೆಕ್ಸ್ಟ್- ಎಡಿಟರ್’ ತಂತ್ರಾಂಶಗಳು

Update: 2017-09-16 17:43 GMT

ಕಂಪ್ಯೂಟರ್ ತಂತ್ರಜ್ಞಾನವು ಭಾರತಕ್ಕೆ ಕಾಲಿರಿಸಿದ ಎಂಬತ್ತರ ದಶಕದಲ್ಲಿ ಇಂಗ್ಲಿಷ್‌ನ್ನು ಟೈಪ್‌ಮಾಡಿ ಪ್ರಿಂಟ್ ಮಾಡಿಕೊಳ್ಳಬ ಹುದಾದ ‘ಪಠ್ಯಸಂಪಾದನಾ ತಂತ್ರಾಂಶಗಳು’ (‘ಟೆಕ್ಸ್ಟ್ -ಎಡಿಟಿಂಗ್ ಸಾಫ್ಟ್‌ವೇರ್) ಬಳಕೆಗೆ ಬಂದವು. ಕಂಪ್ಯೂಟರಿನಲ್ಲಿ ಸಹಜ ಭಾಷೆಯ ಬಳಕೆ ಆರಂಭಗೊಂಡಿದ್ದೇ ಇಂತಹ ‘ಟೆಕ್ಸ್ಟ್ ಎಡಿಟರ್’ಗಳ ಮೂಲಕ. ಪತ್ರಿಕೆಗಳು ಮತ್ತು ಪುಸ್ತಕ ಪ್ರಕಾಶಕರು ಮುದ್ರಣಕ್ಕಾಗಿ ಅಕ್ಷರ ಜೋಡಣೆಗೆ ಫೋಟೊ ಕಂಪೋಸಿಂಗ್ ತಂತ್ರಜ್ಞಾನವನ್ನು ಬದಿಗಿರಿಸಿ ಇಂತಹ ಟೆಕ್ಟ್-ಎಡಿಟರ್‌ಗಳನ್ನು ಬಳಸಲಾರಂಭಿಸಿದರು. ಆಗಲೇ ಕನ್ನಡಾಭಿಮಾನಿ ವಿಜ್ಞಾನಿ, ತಂತ್ರಜ್ಞರು, ಮುದ್ರಣಕಾರರು ಕಂಪ್ಯೂಟರಿನಲ್ಲಿ ಕನ್ನಡದ ಲಿಪಿಗಳಿಗಾಗಿ ಹುಡುಕಾಡತೊಡಗಿದರು. ವಿದೇಶಿ ತಂತ್ರಜ್ಞಾನದಲ್ಲಿ ಕನ್ನಡವನ್ನು ಅಳವಡಿಸುವುದು ಕನ್ನಡಿಗ ತಂತ್ರಜ್ಞರದೇ ಹೊಣೆಗಾರಿಕೆಯಾಯಿತು. ಕನ್ನಡವನ್ನು ಕಂಪ್ಯೂಟರಿಗೆ ಅಳವಡಿಸುವಲ್ಲಿನ ಸವಾಲುಗಳ ಕುರಿತು ಮಾತನಾಡುತ್ತಿದ್ದ ವಿಜ್ಞಾನಿಯೊಬ್ಬರಿಗೆ ಖ್ಯಾತ ವಿಚಾರವಾದಿ, ಸಾಹಿತಿ ಎಚ್.ನರಸಿಂಹಯ್ಯನವರು, ‘‘ಇದಕ್ಕೆ ಚಿಂತೆ ಏಕೆ? ನಿಮ್ಮ ಕಂಪ್ಯೂಟರಿನಲ್ಲಿ ಇಂಗ್ಲಿಷ್ ಅಕ್ಷರಗಳ ಜಾಗದಲ್ಲಿ ಕನ್ನಡದ ಅಕ್ಷರಗಳನ್ನು ಕೂರಿಸಿದರೆ ಆಯಿತು’’ ಎಂದರಂತೆ. ಬೆರಳಚ್ಚುಯಂತ್ರದಲ್ಲಿ (ಟೈಪ್‌ರೈಟರ್) ಕನ್ನಡವನ್ನು ಅಳವಡಿಸು ವಾಗ ಅನುಸರಿಸಿದ ತಂತ್ರವನ್ನು ಅವರು ಅಂದು ನೆನಪಿಸಿದರು. ಆದರೆ, ಕನ್ನಡವನ್ನು ಕಂಪ್ಯೂಟರಿಗೆ ಅಳವಡಿಸುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಕಂಪ್ಯೂಟರ್ ಎಂಬುದು ಟೈಪ್‌ರೈಟರ್ ಅಲ್ಲ. ಅಂದು, ಕನ್ನಡಕ್ಕೆ ಪ್ರತ್ಯೇಕ ಟೆಕ್ಸ್ಟ್ -ಎಡಿಟರ್‌ಗಳನ್ನು ಸಿದ್ಧಪಡಿಸುವಲ್ಲಿ ತಂತ್ರಜ್ಞಾನದ ಹಲವಾರು ಸವಾಲುಗಳಿದ್ದವು.

ಮುದ್ರಣ ಮತ್ತು ಕಂಪ್ಯೂಟರ್ ತಂತ್ರಜ್ಞಾನ ಪರಿಣಿತ ಕನ್ನಡಿಗರು ತಂತ್ರಜ್ಞಾನಗಳ ಸವಾಲುಗಳನ್ನು ಎದುರಿಸಿ ಕನ್ನಡವನ್ನು ಕಂಪ್ಯೂಟರಿಗೆ ಅಳವಡಿಸುವ ಸಾಹಸಕ್ಕೆ ಕೈಹಾಕಿದರು. ಇಂಗ್ಲಿಷ್‌ಗೆ ಹೋಲಿಸಿದರೆ, ಕನ್ನಡದ ಮೂಲಾಕ್ಷರಗಳ ಸಂಖ್ಯೆ ಹೆಚ್ಚು. ಆಗ ಲಿಪಿ ಅಳವಡಿಕೆಗಾಗಿ ಇದ್ದ ಎನ್‌ಕೋಡಿಂಗ್ ವ್ಯವಸ್ಥೆಯಲ್ಲಿ ಕೇವಲ 128 ಅಕ್ಷರಗಳಿಗೆ ಮಾತ್ರವೇ ಅವಕಾಶವಿತ್ತು. ಕನ್ನಡ ಅಕ್ಷರಗಳಿಗೆ ಲಿಪಿ ಸಂಕೇತಗಳನ್ನು (ಎನ್‌ಕೋಡಿಂಗ್) ನಿಗದಿಪಡಿಸುವುದು ಒಂದು ಸಮಸ್ಯೆಯಾಗಿತ್ತು. ಇಂಗ್ಲಿಷ್ ಲಿಪಿಯ ಎನ್‌ಕೋಡಿಂಗ್ ಪದ್ಧತಿಯಂತೆ, ಪ್ರತಿಯೊಂದೂ ಕನ್ನಡದ ಮೂಲಾಕ್ಷರ, ಸಂಯುಕ್ತಾಕ್ಷರ ಮತ್ತು ಒತ್ತಕ್ಷರಗಳಿಗೆ ಒಂದೊಂದು ಸಂಕೇತಗಳನ್ನು ನೀಡುವುದು ಅಸಾಧ್ಯವಾಗಿತ್ತು. ಕನ್ನಡದ ಒತ್ತಕ್ಷರಗಳು ಪರದೆಯ ಮೇಲೆ ಸ್ಪಷ್ಟವಾಗಿ ಕಾಣಿಸುವಂತೆ ಮೂಡಿಸುವುದು ದೊಡ್ಡ ಸಮಸ್ಯೆಯಾಗಿತ್ತು. ಮೂಲಾಕ್ಷರಗಳು, ಸಂಯುಕ್ತಾಕ್ಷರಗಳು ಮತ್ತು ಒತ್ತಕ್ಷರಗಳಿಂದ ಕೂಡಿದ ಕನ್ನಡ ಲಿಪಿಯನ್ನು ಬೆರಳಚ್ಚಿಸಲು ಅವಕಾಶ ಕಲ್ಪಿಸುವ ಕೀಲಿಮಣೆ ವಿನ್ಯಾಸವನ್ನು ರಚಿಸುವುದು ಬಹುದೊಡ್ಡ ಸಮಸ್ಯೆಯಾಗಿತ್ತು.

ಕನ್ನಡದ ಎಡಿಟರ್ ತಂತ್ರಾಂಶಗಳನ್ನು ಸಿದ್ಧಪಡಿಸುವಾಗ, ಇಂಗ್ಲಿಷ್‌ನ ಎನ್‌ಕೋಡಿಂಗ್ ವ್ಯವಸ್ಥೆಯನ್ನೇ ಕನ್ನಡಕ್ಕೂ ಅಳವಡಿಸಿರುವುದು ಒಂದು ಯಶಸ್ವೀ ಪ್ರಯೋಗವಾಗಿದೆ. ಲಭ್ಯವಿದ್ದ 128 ಅಕ್ಷರಸ್ಥಾನಗಳಲ್ಲಿ ಇಂಗ್ಲಿಷ್‌ನ ಅಕ್ಷರಗಳನ್ನು ಉಳಿಸಿಕೊಂಡು ಕನ್ನಡದ ಎಲ್ಲ ಅಕ್ಷರಗಳಿಗಾಗಿ ಜಾಗವನ್ನು ಮಾಡಿಕೊಂಡಿದ್ದು ಕುತೂಹಲಕರ ಕಥೆಯೇ ಆಗಿದೆ. ಕನ್ನಡದ ಅಕ್ಷರಗಳನ್ನು ಬಿಡಿ ಭಾಗಗಳನ್ನಾಗಿಸಿ ವಿಭಾಗಿಸಿಕೊಂಡು, ಅಂದಿನ ಕೋಡ್‌ಪೇಜ್‌ನಲ್ಲಿ ಲಭ್ಯವಿದ್ದ ಕನಿಷ್ಠ ಸಂಖ್ಯೆಯ ಅಕ್ಷರಸ್ಥಾನಗಳಿಗೆ ಅಳವಡಿಸಲಾಯಿತು. ಅಕ್ಷರಗಳನ್ನು ತುಂಡುಗಳನ್ನಾಗಿ ಕತ್ತರಿಸಿಕೊಂಡು ಬಳಸುವ ಈ ತಂತ್ರವು ಹೊಸದೇನಲ್ಲ, ಹಿಂದೆ ಲೆಟರ್‌ಪ್ರೆಸ್ ಎಂದು ಕರೆಯಲಾಗುವ ಮುದ್ರಣ ತಂತ್ರಜ್ಞಾನದಲ್ಲಿ ಸೀಸದಲ್ಲಿ ಎರಕ ಹೊಯ್ದ ಅಕ್ಷರಭಾಗಗಳನ್ನೇ ಜೋಡಿಸಿ ಪೂರ್ಣಾಕ್ಷರಗಳನ್ನಾಗಿ ಸಂಯೋಜಿಸಿಕೊಳ್ಳುವ ಕ್ರಮಗಳು ಬಳಕೆಯಲ್ಲಿದ್ದವು. ಇದೇ ತಂತ್ರವನ್ನು ಕಂಪ್ಯೂಟರ್‌ನಲ್ಲಿಯೂ ಸಹ ಅಳವಡಿಸಿಕೊಳ್ಳಲಾಯಿತು.

ಇರುವ ಇಂಗ್ಲಿಷ್‌ನ ಕೀಲಿಮಣೆಯನ್ನೇ ಬಳಸಿ ಕನ್ನಡವನ್ನು ಮೂಡಿ ಸುವ ಸವಾಲು ಬಗೆಹರಿಸಿಕೊಂಡ ಕಥೆಯೂ ಕುತೂಹಲಕರವೇ. ಇಂಗ್ಲಿಷ್‌ನ ಅ ಅಕ್ಷರವನ್ನು ಹೊಂದಿರುವ ಕೀಲಿಯನ್ನು ಬಳಕೆದಾರ ಒತ್ತಿದಾಕ್ಷಣ ಅದೇ ಅಕ್ಷರವು ಕಂಪ್ಯೂಟರಿನೊಳಗೆ ಊಡಿಕೆಯಾಗುವುದಿಲ್ಲ. ಬದಲಾಗಿ, ಸ್ಕ್ಯಾನ್‌ಕೋಡ್ ಮೂಲಕ ಅಕ್ಷರಗಳು ಪರದೆಯಲ್ಲಿ ಮೂಡುತ್ತವೆ. ಕನ್ನಡ ಲಿಪಿ ಮೂಡಿಕೆಗಾಗಿ ಹಲವು ಕೀಲಿಗಳನ್ನು ಒತ್ತುವ ಮೂಲಕ ಅಕ್ಷರದ ತುಂಡುಗಳು (ಗ್ಲಿಫ್) ಪೂರ್ಣಾಕ್ಷರಗಳಾಗಿ ಜೋಡಣೆ ಗೊಂಡು ಪರದೆಯಲ್ಲಿ ಮೂಡುವ ‘ರೆಂಡರಿಂಗ್ ವ್ಯವಸ್ಥೆಯನ್ನು ರೂಪಿಸಲಾಯಿತು. ಈ ಕಾರ್ಯತಂತ್ರದ ಮೂಲಕ ಸೂಕ್ತ ರೀತಿಯಲ್ಲಿ ಕನ್ನಡ ಲಿಪಿಯು ಮೂಡುವಂತೆ ತಂತ್ರಾಶವನ್ನು ಸಿದ್ಧಪಡಿಸುವಲ್ಲಿ ತಂತ್ರಜ್ಞರು ಯಶಸ್ವಿಯಾದರು. ಒತ್ತಕ್ಷರಗಳು ಕಪ್ಪುಬಿಳುಪಿನ ಪರದೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಅದಕ್ಕಾಗಿ ಅಕ್ಷರಗಳ ಗಾತ್ರವನ್ನೇ ದೊಡ್ಡದಾಗಿ ಮೂಡುವಂತೆ ಮಾಡಲಾಯಿತು. ಆಗ ಕನ್ನಡವನ್ನು ಪರದೆಯ ಮೇಲೆ ಓದುವುದು ಸುಲಭವಾಯಿತು.

ತಂತ್ರಜ್ಞರು ಇಂಗ್ಲಿಷ್ ಕೀಲಿಮಣೆಯ ಬದಲಾಗಿ, ಕನ್ನಡಕ್ಕೆ ಹೊಂದಿಕೊಳ್ಳುವ ಪ್ರತ್ಯೇಕ ಕೀಲಿಮಣೆಯನ್ನು ತಯಾರಿಸಲಿಲ್ಲ. ಅದು, ಕಾರ್ಯಸಾಧ್ಯವೂ ಆಗಿರಲಿಲ್ಲ. ಬದಲಾಗಿ, ಇಂಗ್ಲಿಷ್ ಕೀಲಿಮಣೆ ವಿನ್ಯಾಸದಲ್ಲಿ ಇರುವ ಇತರ ಚಿಹ್ನೆಗಳ ಕೀಲಿಗಳನ್ನೂ ಸಹ ಕನ್ನಡದ ಅಕ್ಷರಗಳ ಮೂಡಿಕೆಗೆ ಬಳಸಲಾಯಿತು. ಬೆರಳಚ್ಚು ಯಂತ್ರದಲ್ಲಿ ಇರುವಂತೆ, ಒಂದು ಪೂಣಾಕ್ಷರವು ಮೂಡಲು ಹಲವು ಕೀಲಿಗಳನ್ನು ಒತ್ತುವಂತೆ ವಿನ್ಯಾಸವನ್ನು ರೂಪಿಸಲಾಯಿತು. ಹೀಗೆ, ಕಡಿಮೆ ಕೀಲಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಯಿತು. ಟೈಪ್‌ರೈಟರ್‌ಗೆ ಬದಲಾಗಿ ಆವಿಷ್ಕಾರಗೊಂಡ ಈ ‘ಟೆಕ್ಸ್ಟ್ ಎಡಿಟರ್’ಗಳನ್ನು ಬಳಸುವವರು ಟೈಪಿಸ್ಟ್‌ಗಳೇ ಆಗಿದ್ದರಿಂದ, ಟೈಪ್‌ರೈಟರ್‌ನಲ್ಲಿದ್ದಂತೆಯೇ ಕೀಲಿಮಣೆ ವಿನ್ಯಾಸವನ್ನು (ಕೀಬೋರ್ಡ್ ಡಿಸೈನ್) ಅನ್ನು ರೂಪಿಸಲಾಯಿತು. ಕನ್ನಡದ ‘ಟೆಕ್ಸ್ಟ್-ಎಡಿಟರ್’ಗಳಲ್ಲಿಯೂ ‘ಕನ್ನಡ ಟೈಪ್‌ರೈಟರ್’ (ಅನಂತ ಕೀಲಿಮಣೆ ವಿನ್ಯಾಸ) ವಿನ್ಯಾಸವನ್ನೇ ಅಳವಡಿಸಲಾಯಿತು.

ಕೆಲವು ತಜ್ಞರು ತಾವು ಸಿದ್ಧಪಡಿಸಿದ ‘ಕನ್ನಡದ ಟೆಕ್ಸ್ಟ್- ಎಡಿಟರ್’ ಗಳನ್ನು ತಮ್ಮ ಬಳಕೆಗೆ ಮಾತ್ರವೇ ಇಟ್ಟುಕೊಂಡರು, ಮತ್ತೆ ಕೆಲವರು, ಅವುಗಳನ್ನು ಎಲ್ಲ ಕನ್ನಡಿಗರಿಗೆ ಉಚಿತವಾಗಿ ಬಳಸಲು ನೀಡಿದರು. ಕಾಲಕ್ರಮೇಣ, ಸರಕಾರಿ ಕಚೇರಿಗಳ ಬಳಕೆಗೆ ಹಾಗೂ ವೃತ್ತಿಪರ ಬಳಕೆಗಾಗಿ ಕಂಪೆನಿಗಳ ಮೂಲಕ ಸಿದ್ಧಪಡಿಸಿದ ಉತ್ತಮ ಸೌಲಭ್ಯವುಳ್ಳ ಕನ್ನಡದ ಎಡಿಟರ್ ತಂತ್ರಾಂಶಗಳು ಮಾರುಕಟ್ಟೆಗೆ ಬಂದವು. ಸ್ವಂತ ಬಳಕೆಗೆ ಎಡಿಟರ್ ತಂತ್ರಾಂಶವನ್ನು ಸಿದ್ಧಪಡಿಸಿಕೊಂಡು, ಕನ್ನಡ ಲಿಪಿವ್ಯವಸ್ಥೆಯನ್ನು ತಯಾರಿಸಿ ಕೊಂಡ ವರ್ಗದಲ್ಲಿ ಅಮೆರಿಕದ ಜಾಣಣಕಸ್ತೂರಿ ರಂಗಾಚಾರ್ ಮೊದಲಿಗರು. ಅಮೆರಿಕದಲ್ಲಿ ಪ್ರಕಟಗೊಳ್ಳುತ್ತಿದ್ದ ‘ಅಮೆರಿಕನ್ನಡ’ ಪತ್ರಿಕೆಯ ಅಕ್ಷರ ಜೋಡಣಾ ಉದ್ದೇಶದಿಂದ ‘ಕಸ್ತೂರಿ’ ಎಂಬ ಹೆಸರಿನ ಕನ್ನಡದ ಎಡಿಟರ್ ತಂತ್ರಾಂಶವನ್ನು ಮೊದಲಿಗೆ ಅವರು 1984-85ರಲ್ಲಿ ಸಿದ್ಧಪಡಿಸಿಕೊಂಡರು. ಅಮೆರಿಕದಲ್ಲಿ ಕನ್ನಡಾಭಿಮಾನದ ಚಟುವಟಿಕೆಗಳನ್ನು ಆರಂಭಿಸಿ, ಬೆಳೆಸಿದವರಲ್ಲಿ ಅಗ್ರಗಣ್ಯರಾದ ಶಿಕಾರಿಪುರ ಹರಿಹರೇಶ್ವರರ ನೇತೃತ್ವದಲ್ಲಿ ಈ ಪತ್ರಿಕೆ ಪ್ರಕಟವಾಗುತ್ತಿತ್ತು. ಕಂಪ್ಯೂಟರ್‌ನಲ್ಲಿ ಕನ್ನಡ ಉಳಿದು ಬೆಳೆಯಲಿ ಎಂಬ ಸಾರ್ವಜನಿಕ ಉದ್ದೇಶದಿಂದ ‘ಡಾಸ್ ವರ್ಡ್‌ಪ್ರೋಸೆಸರ್’ ರೂಪದಲ್ಲಿ ಕನ್ನಡದ ಟೆಕ್ಸ್ಟ್ ಎಡಿಟರ್‌ನ್ನು ಸಿದ್ಧಪಡಿಸಿ ಸಾರಸ್ವತ ಲೋಕಕ್ಕೆ ಉಚಿತವಾಗಿ ನೀಡಿದವರಲ್ಲಿ ಮೊದಲಿಗರು ನಾಡೋಜ ಡಾ.ಕೆ.ಪಿ.ರಾವ್‌ರವರು (ಕನ್ನಿಕಂಬಳ ಪದ್ಮನಾಭ ರಾವ್). 1988ರಲ್ಲಿ ಇವರು ತಮ್ಮ ವಿದ್ಯಾಗುರುಗಳಾದ ಸೇಡಿಯಾಪು ಕೃಷ್ಣಭಟ್ಟರ ನೆನಪಿನಲ್ಲಿ ‘ಸೇಡಿಯಾಪು’ ಎಂಬ ಹೆಸರಿನ ಕನ್ನಡ ತಂತ್ರಾಂಶವನ್ನು ಸಿದ್ಧಪಡಿಸಿ ಕನ್ನಡಿಗರ ಬಳಕೆಗೆ ಉಚಿತವಾಗಿ ನೀಡಿದರು. ಕನ್ನಡ ಭಾಷಾ ಟೆಕ್ಸ್ಟ್‌ಎಡಿಟರ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಟಿಸಿ ಮಾರಾಟವನ್ನು ಮಾಡುವ ಉದ್ದೇಶದಿಂದ ಕನ್ನಡದ ಎಡಿಟರ್‌ನ್ನು ತಯಾರಿಸಿದವರಲ್ಲಿ, ಸಾಫ್ಟ್‌ವೇರ್ ರಿಸರ್ಚ್ ಗ್ರೂಪ್‌ನ ಶ್ರೀ ಟಿ.ಎಸ್.ಮುತ್ತುಕೃಷ್ಣನ್ ಮೊದಲಿಗರು. ಇವರು ‘ಶಬ್ದರತ್ನ’ ಎಂಬ ಎಡಿಟರ್‌ನ್ನು 1987ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಇದು ಸರಕಾರದ ಕಚೇರಿಗಳಲ್ಲಿ ಅಂದು ವ್ಯಾಪಕವಾಗಿ ಬಳಕೆಗೆ ಬಂದು ಜನಪ್ರಿ ಯವಾಯಿತು.

Writer - ಸತ್ಯನಾರಾಯಣ ಎ.

contributor

Editor - ಸತ್ಯನಾರಾಯಣ ಎ.

contributor

Similar News