ಕ್ರೈಸ್ತರ ಅಭಿವೃದ್ಧಿಗೆ ನಿಗಮ ಸ್ಥಾಪಿಸಲು ಒತ್ತಾಯ
ಬೆಂಗಳೂರು, ಸೆ.17: ಕ್ರೈಸ್ತರ ಏಳಿಗೆಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಅಲ್ಪಸಂಖ್ಯಾತರ ಇಲಾಖೆಗೆ ಮೀಸಲಿಟ್ಟ ಹಣದಲ್ಲಿ ಹೆಚ್ಚಿನ ಪಾಲು ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ರಾಜ್ಯ ಸರಕಾರದ ಮುಂದಿಡಲು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘ ನಿರ್ಧರಿಸಿದೆ.
ರವಿವಾರ ಸಂತ ಜೋಸೆಫ್ ಶಾಲೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು. ಎಲ್ಲ ಜಾತಿ, ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮವಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇದ್ದರೂ, ಅಲ್ಲಿ ಬೇರೆ ಸಮುದಾಯದ ಬೇಡಿಕೆಗಳಿಗೆ ಮಾತ್ರ ಬೆಲೆಯಿದೆ. ಹೀಗಾಗಿ ಕ್ರೈಸ್ತ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ರಚಿಸಬೇಕು. ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಸ್ಥಿತಿಗತಿ ತಿಳಿಯಲು ಆಯೋಗ ರಚಿಸಬೇಕು ಎಂದು ಒತ್ತಾಯಿಸಲು ನಿರ್ಧರಿಸಲಾಯಿತು.
2017ನೆ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಇಲಾಖೆಗೆ 2,750 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದರಲ್ಲಿ ಕೈಸ್ತ ಸಮುದಾಯಕ್ಕೆ 850 ಕೋಟಿ ರೂ. ನೀಡಬೇಕು. ರಾಜ್ಯದಲ್ಲಿ ಒಟ್ಟು 42 ಲಕ್ಷ ಕ್ರೈಸ್ತರಿದ್ದಾರೆ. ಆದರೆ 2011 ರ ಜನಗಣತಿಯನ್ನು ಮುಂದಿಟ್ಟುಕೊಂಡು 10.80 ಲಕ್ಷ ಜನರಿದ್ದಾರೆ ಎಂದು ಸರಕಾರ ಹೇಳುತ್ತಿದೆ. ಈ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಿಸಲು ಆಯೋಗ ರಚಿಸಬೇಕು. ಕ್ರೈಸ್ತರನ್ನು ಅಲ್ಪಸಂಖ್ಯಾತರು ಎಂದು ಗುರುತಿಸಿದ್ದರೂ ಸರಕಾರದ ಅನೇಕ ಸೌಲಭ್ಯಗಳು ದೊರೆಯುತ್ತಿಲ್ಲ. ಆಯೋಗವು ಸರಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಸಮುದಾಯವನ್ನು ಅಲ್ಪಸಂಖ್ಯಾತ ವರ್ಗದಲ್ಲೇ ನಿರ್ದಿಷ್ಟ ವಿಭಾಗಕ್ಕೆ ಸೇರಿಸಿ ಮೀಸಲು ನೀಡಲು ಕ್ರಮ ಕೈಗೊಳ್ಳಬೇಕು. ಈ ಎಲ್ಲ ಅಂಶಗಳನ್ನು ಸರಕಾರದ ಮುಂದಿಟ್ಟು ಬೇಡಿಕೆಗಾಗಿ ಆಗ್ರಹಿಸಬೇಕು ಎಂದು ತೀರ್ಮಾನಿಸಲಾಯಿತು.
ಈ ವೇಳೆ ಸಂಘದ ಕಾರ್ಯಾಧ್ಯಕ್ಷ ಎ್.ಟಿ.ಆರ್. ಕೊಲಾಸೊ ಮಾತನಾಡಿ, ಸರಕಾರ ಕ್ರೈಸ್ತ ಸಮುದಾಯಕ್ಕೆ ಪ್ರತ್ಯೇಕ ಅನುದಾನ ನೀಡುತ್ತಿದೆ. ಆದರೆ ಕ್ರೈಸ್ತರು ಇದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇದರಿಂದಾಗಿ ಅನುದಾನ ಬೇರೆ ಸಮುದಾಯಗಳಿಗೆ ಹೋಗುತ್ತಿದೆ. ಕ್ರೈಸ್ತರನ್ನು ಅಲ್ಪಸಂಖ್ಯಾತರು ಎಂದು ಮಾತ್ರ ಗುರುತಿಸಿರುವುದರಿಂದ ಇಂತಹ ಸಮಸ್ಯೆಯಾಗುತ್ತಿದೆ. ಅಲ್ಪಸಂಖ್ಯಾತರಲ್ಲಿಯೇ ಕೆಲವು ವಿಭಾಗಗಳನ್ನು ಮಾಡಿ ಕ್ರೈಸ್ತರನ್ನು ಪ್ರತ್ಯೇಕವಾಗಿ ಗುರುತಿಸುವಂತಾಗಬೇಕು. ಆಗ ಅನುದಾನವು ಬೇರೆ ಸಮುದಾಯಗಳಿಗೆ ವರ್ಗಾವಣೆಯಾಗುವುದಿಲ್ಲ ಎಂದರು.
ಸಂಘದ ಅಧ್ಯಕ್ಷ ಹ್ಯಾರಿ ಡಿಸೋಜ ಮಾತನಾಡಿ, ಕ್ರೈಸ್ತರು ಒಗ್ಗಟ್ಟಾಗಿ ಬೇಡಿಕೆಗಳ ಈಡೇರಿಕೆಗೆ ಶ್ರಮ ಪಡಬೇಕು. ಸರಕಾರವು ಬೇಡಿಕೆಗಳನ್ನು ಪರಿಗಣಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಆರಂಭಿಸಲಾಗುವುದು. ಪ್ರತಿ ಜಿಲ್ಲೆಗಳಲ್ಲಿ ಹೋರಾಟ ಆರಂಭಿಸಿದ ಅದನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಎಸ್‌ಐಡಿಬಿಐ ವ್ಯವಸ್ಥಾಪಕ ನಿರ್ದೇಶಕ ಎ.ಸಿ.ಸಾಹು, ಎಂಎಸ್‌ಎಂಇ ನಿರ್ದೇಶಕ ರಂಗಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.