ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್ ಬಗ್ಗೆ ಹೆಚ್ಚು ಗೊತ್ತಿರದ ವಿಷಯಗಳಿಲ್ಲಿವೆ

Update: 2017-09-19 08:17 GMT

ಹಿಮಾಲಯದ ಪೂರ್ವ ಕಾರಾಕೋರಂ ಶ್ರೇಣಿಯಲ್ಲಿರುವ ಸಿಯಾಚಿನ್ ನೀರ್ಗಲ್ಲು ಪ್ರದೇಶವು ಕಾರಾಕೋರಂನ ಐದು ಅತ್ಯಂತ ಬೃಹತ್ ಗ್ಲೇಸಿಯರ್‌ಗಳಲ್ಲೊಂದಾಗಿದೆ. ಅದು ಸಮುದ್ರ ಮಟ್ಟದಿಂದ ಸರಾಸರಿ 18,000 ಅಡಿ ಎತ್ತರದಲ್ಲಿದೆ. 78 ಕಿ.ಮೀ. ಉದ್ದವಿರುವ ಈ ನೀರ್ಗಲ್ಲು ಪ್ರದೇಶವು ಕಾರಾಕೋರಂ ಶ್ರೇಣಿಯಲ್ಲಿ ಅತ್ಯಂತ ಉದ್ದ ಮತ್ತು ವಿಶ್ವದ ಧ್ರುವೇತರ ಪ್ರದೇಶಗಳಲ್ಲಿಯ ಎರಡನೇ ಅತ್ಯಂತ ಉದ್ದ ಗ್ಲೇಸಿಯರ್ ಆಗಿದೆ.

1984,ಎ.13ರಂದು ಭಾರತೀಯ ಸೈನಿಕರು ಮೊದಲ ಬಾರಿಗೆ ಸಿಯಾಚಿನ್ ಗ್ಲೇಸಿಯರ್ ಎಂಬ ಈ ಹಿಮಪರ್ವತದ ಮೇಲೆ ಕಾಲಿರಿಸಿದ್ದರು. ಅಲ್ಲಿಂದೀಚೆಗೆ ಮೂರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಇಲ್ಲಿ ನೂರಾರು ಸಾವುಗಳು ಸಂಭವಿಸಿವೆ ಮತ್ತು ಈ ಯುದ್ಧರಂಗ ಇಂದಿಗೂ ಭಯ-ಬೆರಗು ಮೂಡಿಸುತ್ತಿದೆ. ಇಲ್ಲಿ ನಡೆಯುತ್ತಿರುವುದು ವಿಶ್ವದ ಅತ್ಯಂತ ಶೀತಲ ಯುದ್ಧವಾಗಿದೆ.

ಸಿಯಾಚಿನ್ ಗ್ಲೇಸಿಯರ್ ಭಾರತವು ತನ್ನ ಎದುರಾಳಿಗಳಾದ ಪಾಕಿಸ್ತಾನ ಮತ್ತು ಚೀನಾಗಳಿಗಿಂತ ಮೇಲುಗೈ ಹೊಂದಿದೆ. 1984ರಲ್ಲಿ ‘ಆಪರೇಷನ್ ಮೇಘದೂತ’ ಆರಂಭಿಸಿದಾಗಿನಿಂದಲೂ ಭಾರತವು ಈ ಪ್ರದೇಶದ ಮೇಲೆ ವಿಜಯ ಸಾಧಿಸಿದೆ. ಆಪರೇಷನ್ ಮೇಘದೂತ ವ್ಯಾಪಕ ಪ್ರಶಂಸೆಗೊಳಗಾಗಿದ್ದರೂ, ಈ ಪ್ರದೇಶವನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಪಾಕಿಸ್ತಾನದ ಪ್ರಯತ್ನಗಳು ಹೆಚ್ಚಿನ ಸುದ್ದಿಯಾಗಿಲ್ಲ.

ಸಿಯಾಚಿನ್ ಯೋಧರ ಪಾಲಿಗೆ ದುಃಸ್ವಪ್ನವಾಗಿದೆ. ಇಲ್ಲಿ ಅವರ ತೆರೆದ ಚರ್ಮ ಯಾವುದೇ ಲೋಹದ ವಸ್ತುವಿನೊಡನೆ 15 ಸೆಕೆಂಡ್‌ಗೂ ಅಧಿಕ ಕಾಲ ಸಂಪರ್ಕದಲ್ಲಿದ್ದರೆ ಅವರಿಗೆ ಹಿಮಹುಣ್ಣುಗಳಾಗುವ ಅಪಾಯವಿದೆ.

ಆಗಾಗ್ಗೆ ಬವಳಿ ಮತ್ತು ಭಾರೀ ತಲೆನೋವು ಬರುವುದು ಇಲ್ಲಿ ಸಾಮಾನ್ಯವಾಗಿದೆ. ಇಷ್ಟೊಂದು ಎತ್ತರದಲ್ಲಿ ದೀರ್ಘ ಕಾಲ ವಾಸವಿರುವ ಭಾರತೀಯ ಯೋಧರು ತೂಕ ಇಳಿಕೆ, ಹಸಿವು ಕುಗ್ಗುವಿಕೆ, ನಿದ್ರೆಯಲ್ಲಿ ಏರುಪೇರು ಮತ್ತು ಜ್ಞಾಪಕ ಶಕ್ತಿ ಕುಂಠಿತ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅಸ್ಪಷ್ಟ ಮಾತುಗಳೂ ಇಲ್ಲಿ ಯೋಧರಲ್ಲಿ ಸಾಮಾನ್ಯ.

ಸಿಯಾಚಿನ್‌ನಲ್ಲಿ ಶೀತಲ ಸಮರ ಆರಂಭಗೊಂಡಾಗಿನಿಂದ ಈವರೆಗೆ ಒಟ್ಟು ವೆಚ್ಚ ಅಂದಾಜು ಐದು ಶತಕೋಟಿ ಡಾಲರ್‌ಗಳನ್ನು ಮೀರಿದೆ.

ಸಿಯಾಚಿನ್‌ನಲ್ಲಿ ಪಾಕಿಸ್ತಾನ ಮತ್ತು ಭಾರತ ತಲಾ 150 ಕಾವಲು ಠಾಣೆಗಳನ್ನು ಹೊಂದಿದ್ದು, ಒಟ್ಟು ಸುಮಾರು 6,000 ಸೈನಿಕರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಹಾರ ಮತ್ತು ಮದ್ದುಗುಂಡುಗಳ ಸಾಗಾಣಿಕೆಗಾಗಿ ಪಾಕಿಸ್ತಾನವು ಅರ್ಧ ಡಝನ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ಇಲ್ಲಿ ಪ್ರತಿ ಗಂಟೆ ಹೆಲಿಕಾಪ್ಟರ್ ಹಾರಾಟಕ್ಕೆ 55,000 ರೂ.ವೆಚ್ಚ ತಗಲುತ್ತದೆ.

ಸಿಯಾಚಿನ್ ಗ್ಲೇಸಿಯರ್‌ನ ವ್ಯೆಹಾತ್ಮಕ ಮಹತ್ವವೆಂದರೆ ಅದು ಭಾರತಿಯ ಸೇನೆಯ ಶತ್ರುಗಳಾದ ಪಾಕಿಸ್ತಾನಿ ಸೇನೆ ಮತ್ತು ಚೀನಾದ ಜನತಾ ವಿಮೋಚನಾ ಸೇನೆ(ಪಿಎಲ್‌ಎ) ಗಳ ನಡುವೆ ನೇರ ಸಂಪರ್ಕವನ್ನು ತಡೆಯುತ್ತದೆ. ಅದು ಪ್ರದೇಶದಲ್ಲಿ ಭಾರತಕ್ಕೆ ನೆಲೆಯನ್ನೊದಗಿಸಿರುವ ಜೊತೆಗೆ ಪಾಕ್ ಮತ್ತು ಚೀನಾವನ್ನು ಸಂಪರ್ಕಿಸುವ ಕಾರಾಕೋರಂ ಹೆದ್ದಾರಿಯಲ್ಲಿನ ಚಲನವಲನಗಳ ಮೇಲೆ ನಿಗಾಯಿರಿಸಲೂ ಅವಕಾಶ ಕಲ್ಪಿಸಿದೆ. ಭಾರತೀಯ ಸೇನೆಯು ಇಲ್ಲಿ ವರ್ಷದ 365 ದಿನಗಳ ಕಾಲವೂ ತನ್ನ ಠಾಣೆಗಳನ್ನು ಕಾಯ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News