ಪಾಕಿಸ್ತಾನಕ್ಕೆ ಭೇಟಿ ನೀಡಿದ ಜಸ್‌ಪ್ರೀತ್ ಬುಮ್ರಾಗೆ ಪಾಕ್ ಅಭಿಮಾನಿಗಳಿಂದ ಕೃತಜ್ಞತೆ!

Update: 2017-09-19 13:21 GMT

ಹೊಸದಿಲ್ಲಿ, ಸೆ.19: ಭಾರತದ ಪ್ರಮುಖ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯುವಾಗ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಹೋಲುವ ಹಲವು ಜನರು ಇರುವುದನ್ನು ನೋಡಿದ್ದೇವೆ. ಪಾಕಿಸ್ತಾನದಲ್ಲಿ ಪಿಜ್ಜಾ ವಿತರಿಸುವ ಹುಡುಗ ಥೇಟ್ ವಿರಾಟ್ ಕೊಹ್ಲಿಯನ್ನೇ ಹೋಲುತ್ತಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು.

ಇದೀಗ ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾರನ್ನೇ ಹೋಲುವ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡುತ್ತಿದ್ದಾನೆ. ಬುಮ್ರಾನನ್ನೇ ಹೋಲುವ ಯುವಕ ಪಾಕಿಸ್ತಾನ ಹಾಗೂ ವಿಶ್ವ ಇಲೆವೆನ್ ನಡುವೆ ಇತ್ತೀಚೆಗೆ ಕೊನೆಗೊಂಡ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದ.

ಗ್ರೀಟ್ ಟೀಮ್ ಪಾಕಿಸ್ತಾನದ ಫೇಸ್‌ಬುಕ್ ಪೇಜ್‌ನಲ್ಲಿ ಜಸ್‌ಪ್ರಿತ್ ರನ್ನು ಹೋಲುವ ವ್ಯಕ್ತಿಯ ಚಿತ್ರವನ್ನು ಹಾಕಲಾಗಿತ್ತು, ‘‘ವಿಶ್ವ ಇಲೆವೆನ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಆಗಮಿಸಿರುವ ಜಸ್‌ಪ್ರಿತ್ ಬುಮ್ರಾಗೆ ಕೃತಜ್ಞತೆಗಳು. ಪ್ರಮುಖ ಟೂರ್ನಿಗಳಲ್ಲಿ ಪಾಕಿಸ್ತಾನಕ್ಕೆ ನಿಮ್ಮ ಬೆಂಬಲ ಸದಾಕಾಲ ಇರಲಿ. ಧನ್ಯವಾದಗಳು’’ ಎಂದು ಟ್ವೀಟ್ ಮಾಡಲಾಗಿತ್ತು.

ಇತ್ತೀಚೆಗೆ ಕೊನೆಗೊಂಡ ಐಸಿಸಿ ವಿಶ್ವ ಇಲೆವೆನ್ ತಂಡದಲ್ಲಿ ಭಾರತದ ಸ್ಟಾರ್ ಆಟಗಾರರಾದ ಕೊಹ್ಲಿ ಹಾಗೂ ಎಂ.ಎಸ್. ಧೋನಿ ಇಲ್ಲದೇ ಇರುವುದಕ್ಕೆ ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ್ನು ವಾಪಸ್ ತರುವ ಪ್ರಯತ್ನ ವಾಗಿ ಐಸಿಸಿ ಹಾಗೂ ಪಿಸಿಬಿ ಇತ್ತೀಚೆಗೆ ಲಾಹೋರ್‌ನಲ್ಲಿ ಇಂಡಿಪೆಂಡೆಕ್ಸ್ ಕಪ್ ಟ್ವೆಂಟಿ-20 ಸರಣಿಯನ್ನು ಆಯೋಜಿಸಿತ್ತು. ಈ ಸರಣಿಯನ್ನು ಆತಿಥೇಯ ಪಾಕಿಸ್ತಾನ 2-1 ರಿಂದ ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News