ಬೆಂಗಳೂರು ವಕೀಲರ ಸಂಘಕ್ಕೆ ಡಿಸೆಂಬರ್ ಎರಡನೆ ವಾರದಲ್ಲಿ ಚುನಾವಣೆ: ಪುಟ್ಟೇಗೌಡ
ಬೆಂಗಳೂರು, ಸೆ. 19: ಬೆಂಗಳೂರು ವಕೀಲರ ಸಂಘಕ್ಕೆ ಡಿಸೆಂಬರ್ ಎರಡನೆ ವಾರದಲ್ಲಿ ಚುನಾವಣೆ ನಡೆಯಲಿದ್ದು, ಸದಸ್ಯರ ಪರಿಶೀಲನೆ ಮತ್ತು ಮತದಾರರ ಪಟ್ಟಿ ಸಿದ್ಧಪಡಿಸುವ ಕಾರ್ಯ ಭರದಿಂದ ನಡೆದಿದೆ.
ಈ ದಿಸೆಯಲ್ಲಿ ಸಿಟಿ ಸಿವಿಲ್ ಕೋರ್ಟ್, ಮೆಯೊಹಾಲ್, ಮ್ಯಾಜಿಸ್ಟ್ರೇಟ್ ಮತ್ತು ಹೈಕೋರ್ಟ್ ಆಡಳಿತ ಮಂಡಳಿ ಪದಾಧಿಕಾರಿಗಳ ಸಭೆ ಸದ್ಯದಲ್ಲಿಯೇ ನಡೆಯಲಿದೆ. ಚುನಾವಣೆಯಲ್ಲಿ ಸ್ಮಾರ್ಟ್ ಕಾರ್ಡ್ ಕಡ್ಡಾಯ. ಇಲ್ಲದವರಿಗೆ ಅಕ್ಟೋಬರ್ 9, 10 ಮತ್ತು 11ರಂದು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ವಿತರಿಸಲಾಗುವುದು. ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ 12 ಮತ್ತು 13, ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ 16 ಹಾಗೂ 24 ಮತ್ತು 25ರಂದು ಹೈಕೋರ್ಟ್‌ನಲ್ಲಿ ವಿತರಿಸಲಾಗುವುದು.ಮತದಾರರ ಪಟ್ಟಿ ನವೆಂಬರ್ 8 ಅಥವಾ 9ಕ್ಕೆ ಅಂತಿಮಗೊಳ್ಳಲಿದೆ ಎಂದು ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟೇಗೌಡ ತಿಳಿಸಿದ್ದಾರೆ.
2016ರ ಮಾರ್ಚ್ 31ಕ್ಕೆ ಕೊನೆಗೊಂಡಂತೆ ಸಂಘದಲ್ಲಿ ಒಟ್ಟು 21,999 ಸದಸ್ಯರಿದ್ದಾರೆ. ಇವರಲ್ಲಿ 15,498 ಸ್ಮಾರ್ಟ್ ಕಾರ್ಡ್ ಪಡೆದವರಿದ್ದಾರೆ. ಸಿಟಿ ಸಿವಿಲ್ ಕೋರ್ಟ್ ವಿಭಾಗದಲ್ಲಿ 9,945, ಹೈಕೋರ್ಟ್‌ನಲ್ಲಿ 3,496, ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ 2,273 ಮತ್ತು ಮೆಯೊಹಾಲ್ ಕೋರ್ಟ್‌ನಲ್ಲಿ 959 ಅಜೀವಸದಸ್ಯರಿದ್ದಾರೆ ಎಂದು ವಿವರಿಸಿದರು.
ಎ.ಜಿ.ಶಿವಣ್ಣ ನೇತೃತ್ವದಲ್ಲಿ ಸಮಿತಿ: ದ್ವಿಸದಸ್ಯತ್ವ ಹೊಂದಿದವರನ್ನು ಪತ್ತೆ ಹಚ್ಚಲು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ.ಶಿವಣ್ಣ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಗೆ ಸದಸ್ಯರನ್ನು ನೇಮಕ ಮಾಡಿಕೊಳ್ಳುವ ಹಾಗೂ ದ್ವಿಸದಸ್ಯತ್ವ ಹೊಂದಿದವರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನು ಶಿವಣ್ಣ ಅವರಿಗೆ ನೀಡಲಾಗಿದೆ ಎಂದು ಪುಟ್ಟೇಗೌಡ ತಿಳಿಸಿದರು.