ಬಿರುಕು ಪತ್ತೆ ಹಚ್ಚುವ ಸಾಧನ ಸಂಶೋಧನೆ

Update: 2017-09-19 17:59 GMT

ಬೆಂಗಳೂರು, ಸೆ. 19: ರೈಲು ಹಳಿಗಳಲ್ಲಿನ ಬಿರುಕು ಕಂಡು ಹಿಡಿಯುವ ಸಲುವಾಗಿ ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯದ ಇಂಜಿನಿಯರ್ ವಿದ್ಯಾರ್ಥಿಗಳು ಬಿರುಕು ಪತ್ತೆ ಹಚ್ಚುವ ಸಾಧನ ಕಂಡು ಹಿಡಿದಿದ್ದಾರೆ.

ಈ ಸಾಧನ ಹಳಿಗಳಲ್ಲಿನ ಬಿರುಕುಗಳನ್ನು ಹಾಗೂ ಬಿರುಕು ಉಂಟಾಗುವ ಮುನ್ನವೇ ಅಲ್ಲಿನ ಲೋಪವನ್ನು ಕಂಡುಹಿಡಿಯಲಿದೆ. ಆ ಮೂಲಕ ರೈಲು ಅಪಘಾತ ತಪ್ಪಿಸಲು ಸಹಕಾರಿಯಾಗಲಿದೆ. ಈ ಸಾಧನವನ್ನು ಪ್ರತಿ ರೈಲಿನ ಅಡಿಯಲ್ಲಿ ಅಳವಡಿಸಬಹುದು. ಈ ಸಾಧನ ಹಳಿಗಳ ಲೋಪಗಳನ್ನು ವೈಜ್ಞಾನಿಕವಾಗಿ ದಾಖಲಿಸಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತದೆ. ಇದರಿಂದ ಸೂಕ್ತ ರಿಪೇರಿಗಳನ್ನು ಮಾಡಿ ದುರಂತಗಳನ್ನು ತಪ್ಪಿಸಬಹದು ಎಂದು ಸಂಶೋಧನೆ ನಡೆಸಿದ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳಾದ ಶಶಾಂಕ್ ಶಂಕರ್, ವಿ.ದಿಲೀಪ್ ಸಾಯಿ, ಅರ್ಜುನ್ ಕಿಣಿ, ವಿ.ಅಖಿಲ್ ಹಾಗೂ ಶ್ರೇಯಸ್ ದತ್ತ ಶಿವರಾಮ ಅವರ ತಂಡ ಕಂಡುಹಿಡಿದ ಈ ಸಾಧನಕ್ಕೆ ಚೆನೈನಲ್ಲಿ ನ್ಯಾಸ್‌ಕಾಂ (ನ್ಯಾಶನಲ್ ಅಸೋಸಿಯೇಶನ್, ಸಾಫ್ಟ್‌ವೇರ್ ಆ್ಯಂಡ್ ಸರ್ವೀಸಸ್ ಕಂಪೆನೀಸ್) ಹಾಗೂ ಬಾಯನ್ಸಿ ಆಯೋಜಿಸಿದ ತಂತ್ರಜ್ಞಾನ ಕ್ಷೇತ್ರದ ರಾಷ್ಟ್ರೀಯ ಸಂಶೋಧನಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದೆ.

ರಾಷ್ಟ್ರದ ಸುಮಾರು 113 ಕಾಲೇಜುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ದೇಶದಲ್ಲಿಯೇ ಮೊದಲ ಬಾರಿಗೆ ಬಿರುಕು ಪತ್ತೆ ಹಚ್ಚುವ ಸಾಧನ ಅನ್ವೇಷಣೆ ಮಾಡಿದ್ದಾರೆ ಎಂದು ನ್ಯಾಸ್ಕಾಂನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ವಿವಿ ಪ್ರಾಧ್ಯಾಪಕ ಹಾಗೂ ಮಾರ್ಗದರ್ಶಕ ಡಾ. ರಘುನಂದನ್ ತಿಳಿಸಿದ್ದಾರೆ.

ಈ ಅನ್ವೇಷಣೆಗೆ ಪೇಟ್ರಿಯಾಟ್ ಎಂದು ನಾಮಕರಣ ಮಾಡಿರುವ ವಿದ್ಯಾರ್ಥಿಗಳ ತಂಡ, ಈ ನಿಟ್ಟಿನಲ್ಲಿ ಪೇಟೆಂಟ್ ಗಳಿಸಲು ಕಾರ್ಯೋನ್ಮುಖರಾಗಿದ್ದಾರೆ. ತಮ್ಮ ವಿನೂತನ ಅನ್ವೇಷಣೆಯನ್ನು ವಿದ್ಯಾರ್ಥಿಗಳು ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರಿಗೆ ಅರ್ಪಿಸಿದ್ದಾರೆ ಎಂದು ರಘುನಂದನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News