ಬಸವ ಧರ್ಮ ಘೋಷಣೆಗೆ ಆಗ್ರಹ

Update: 2017-09-19 18:01 GMT

ಬೆಂಗಳೂರು, ಸೆ. 19: ರಾಜ್ಯ ಸರಕಾರ ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮ ಎಂದು ಘೋಷಣೆ ಮಾಡುವುದರ ಬದಲಿಗೆ ಬಸವಣ್ಣನವರ ಎಲ್ಲ ಅನುಯಾಯಿಗಳನ್ನು ಒಳಗೊಂಡ ‘ಬಸವ ಧರ್ಮ’ ಘೋಷಣೆ ಮಾಡಬೇಕು ಎಂದು ಬಸವ ಧರ್ಮದ ಪ್ರತಿಪಾದಕ ಸಂಘಟನೆ ವೇದಿಕೆ ಆಗ್ರಹಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಸಂಚಾಲಕ ಶಂಕರ ಮುನವಳ್ಳಿ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿರುವ ಕೆಲವು ಲಿಂಗಾಯತ ಸಮುದಾಯದ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಲಿಂಗಾಯತ ಮತ್ತು ವೀರಶೈವ ಹೆಸರಿನಲ್ಲಿ ಪ್ರತ್ಯೇಕ ಧರ್ಮ ಘೋಷಣೆಯಾಗಲಿ ಎಂದು ಚಳವಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ನಾಡಿನಲ್ಲಿ ಕ್ರೈಸ್ತ, ಭೌದ್ಧ, ಮುಸ್ಲಿಂ, ಸಿಖ್ ಹಾಗೂ ಜೈನ್ಯ ಧರ್ಮಗಳಿದ್ದು, ಇವು ಸರಳತೆ ಹಾಗೂ ಸಮಾನತೆಯನ್ನು ಹೊಂದಿವೆ. ಆದರೆ, ವೀರಶೈವ-ಲಿಂಗಾಯತ ಉಪ ಜಾತಿಗಳು ಬೇರೆ ಧರ್ಮಗಳ ಪದ್ಧತಿಗಳನ್ನು ವಿರೋಧಿಸುತ್ತವೆ. ಲಿಂಗಾಯತ ಧರ್ಮ ಆಚರಣೆಯಿಂದ, ಜಾತಿ ಸಮಾನತೆ ಕೊರತೆಯಿಂದ ದೂರ ಉಳಿದಿದೆ. ಹೀಗಾಗಿ, ಸರಕಾರ ಲಿಂಗಾಯತ ಎಂಬ ಸ್ವತಂತ್ರ ಧರ್ಮದ ಬದಲಿಗೆ ಬಸವ ಧರ್ಮ ಘೋಷಣೆ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಲಿಂಗಾಯತ-ವೀರಶೈವ ಧರ್ಮ ಘೋಷಣೆಯಾದರೆ ಲಿಂಗಾಯತರಲ್ಲಿರುವ ವಿವಿಧ ಉಪ ಜಾತಿಗಳಾದ ಅಂಬಿಗರು, ಮಡಿವಾಳರು, ಹೂಗಾರರು, ನೇಕಾರರು, ಬಣಗಾರರು, ಮೇದಾರ, ಹಡಪದ, ಮಾಳಿ, ಉಪ್ಪಾರ, ಬಡಿಗೇರರು, ಕಂಬಾರ, ಗೌಳಿ ಸೇರಿದಂತೆ ಹಲವು ಹಿಂದುಳಿದ ಜಾತಿಗಳು ಧರ್ಮದಿಂದ ದೂರ ಉಳಿಯುತ್ತವೆ ಎಂದರು.

ಲಿಂಗಾಯತ ಸಮುದಾಯದಲ್ಲಿ ಶೇ.10 ರಷ್ಟು ಜನರು ಮಾತ್ರ ಶ್ರೀಮಂತರಿದ್ದಾರೆ. ಆದುದರಿಂದ ಸರಕಾರ ಧರ್ಮ ಘೋಷಣೆ ಮಾಡಿ ವೀರಶೈವ-ಲಿಂಗಾಯತರನ್ನು ಪ್ರತ್ಯೇಕ ಮಾಡುವುದರ ಬದಲಿಗೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಯಾಗಲು ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಲ್ಪಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News