ರೈತರ ಮೇಲೆ ಅರಣ್ಯ ಇಲಾಖೆ ದರ್ಪ: ಆರೋಪ

Update: 2017-09-20 04:53 GMT

ಚಿಕ್ಕಮಗಳೂರು, ಸೆ.19: ತಾಲೂಕಿನ ನಾಗರಹಳ್ಳಿ ಎಂಬುದು ಕೃಷಿಕರ ಪುಟ್ಟ ಗ್ರಾಮ. ಹತ್ತಾರು ಮನೆಗಳಿರುವ ಆ ಊರಿನ ಪ್ರತೀ ರೈತರ ಮೇಲೂ 7/8 ಪ್ರಕರಣಗಳಂತೆ ಒಟ್ಟು 194 ಪ್ರಕರಣಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಾಖಲಿಸಿದ್ದಾರೆ. ಹಾಗಂತ, ಈ ರೈತರೆಲ್ಲಾ ಕಳ್ಳರಾಗಲೀ, ಡಕಾಯಿತರಾಗಲೀ ಅಲ್ಲ.

ತಹಶೀಲ್ದಾರ್ ಕೋರ್ಟ್ ಹಾಗೂ ಸಿವಿಲ್ ಕೋರ್ಟ್ ಯಥಾ ಸ್ಥಿತಿ ಕಾಪಾಡಿ ಎಂದು ಹೇಳಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿನ ರೈತರಿಗೆ ಜಮೀನಿನಲ್ಲಿ ಉಳುಮೆ ಮಾಡಲು ಬಿಡುತ್ತಿಲ್ಲ. ನಾಗರಹಳ್ಳಿ ಗ್ರಾಮದ ಸ.ನಂ. 116-17 ರಲ್ಲಿ 700 ಎಕರೆಗೂ ಅಧಿಕ ಗೋಮಾಳ ಜಾಗವಿದೆ. ಇದರಲ್ಲಿ 256 ಎಕರೆಗೆ ಫಾರಂ ನಂಬರ್ 53ರ ಅಡಿ ಅರ್ಜಿ ಹಾಕಿ 1999 ರಿಂದಲೂ ನಾಗರಹಳ್ಳಿ ರೈತರು ಉಳುಮೆ ಮಾಡಿಕೊಂಡಿದ್ದಾರೆ.

ಸುಮಾರು 76 ರೈತರಿಗೆ ಸಾಗುವಳಿ ಚೀಟಿ ಲಭಿಸಿದೆ. ತಹಶೀಲ್ದಾರ್ ಹಾಗೂ ಸಿವಿಲ್ ಕೋರ್ಟ್‌ನಲ್ಲಿ ಆ ಗೋಮಾಳದ ಯಥಾ ಸ್ಥಿತಿ ಮುಂದುವರಿಸಲು ಆದೇಶಿಸಿದರೂ ಅರಣ್ಯ ಇಲಾಖೆ ರೈತರ ಮೇಲೆ ದರ್ಪ ತೋರತ್ತಿದೆ. ರೈತರು ತಮ್ಮ ಈ ಸ್ವಂತ ಜಮೀನಿನಲ್ಲಿ ಉಳುಮೆ ಮಾಡಲು ನಿಂತರೆ ಅರಣ್ಯಾಧಿಕಾರಿಗಳು ಎತ್ತುಗಳನ್ನು ವಶಕ್ಕೆ ಪಡೆದು ರೈತರನ್ನು ದಸ್ತಗಿರಿ ಮಾಡಲಾಗುತ್ತಿದೆ. ಕೋರ್ಟ್ ಆದೇಶ ತೋರಿಸಿದರೂ ಇಲ್ಲಿ ಆ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಅರಣ್ಯ ಅಧಿಕಾರಿಗಳಿಂದ ಸಿಗುತ್ತಿಲ್ಲ ಎನ್ನುವ ಆರೋಪ ರೈತರದ್ದಾಗಿದೆ.

ರೈತರು ತಮ್ಮ ಜಮೀನು ಉಳಿಸಿಕೊಳ್ಳಲು ಹಾಕಿದ ಅರ್ಜಿಯನ್ನು ಅರಣ್ಯ ಭೂಮಿ ಅಂತ ವಜಾ ಮಾಡಿದರೂ ಮರು ಪರಿಶೀಲಿಸುವಂತೆ ಕೋರ್ಟ್ ಆದೇಶಿಸಿದೆ. ತಹಶೀಲ್ದಾರ್ ಕೋರ್ಟ್‌ನಲ್ಲಿ ಆ ಜಾಗದ ಯಥಾ ಸ್ಥಿತಿ ಕಾಪಾಡುವಂತೆ ಆದೇಶಿಸಿರುವುದರಿಂದ ರೈತರು ಸತ್ತರೂ ನಾವು ಈ ಜಮೀನು ಬಿಡುವುದಿಲ್ಲ ಎನ್ನುತ್ತಿದ್ದಾರೆ. ಕೋರ್ಟ್ ಆದೇಶ ಇಟ್ಟುಕೊಂಡು ರೈತರು ಉಳುಮೆ ಮಾಡುತ್ತಿದ್ದಾರೆ. ಆದರೆ ಅರಣ್ಯ ಅಧಿಕಾರಿಗಳು ಅರಣ್ಯಭೂಮಿ ಎಂದು ರೈತರ ಬಳಿ ಕ್ಯಾತೆ ತೆಗೆಯುತ್ತಿದ್ದಾರೆ ಎನ್ನುವುದು ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಹಲವು ವರ್ಷಗಳಿಂದ ರೈತರು ಮತ್ತು ಅರಣ್ಯ ಸಿಬ್ಬಂದಿಗಳ ನಡುವೆ ಗೋಮಾಳ ಜಾಗಕ್ಕಾಗಿ ಕಿತ್ತಾಟ ನಡೆಯುತ್ತಿದ್ದು, ರೈತರು ನಾವು ಭೂಮಿ ಬಿಡುವುದಿಲ್ಲ ಎನ್ನುತ್ತಿದ್ದರೆ ಅರಣ್ಯ ಇಲಾಖೆಯವರು ನಾವು ಭೂಮಿಯನ್ನು ಕೊಡುವುದಿಲ್ಲ ಎನ್ನುತ್ತಿದ್ದಾರೆ.

ರೈತರು ಹಾಗೂ ಅರಣ್ಯ ಇಲಾಖೆಯ ಈ ಜಗಳ ಇಂದು ಅಥವಾ ನಿನ್ನೆಯದ್ದಲ್ಲ. ಳೆದ 7/8 ವರ್ಷಗಳಿಂದಲೂ ನಡೆ ಯುತ್ತಿದೆ. ಇಲ್ಲಿ ಉಳುಮೆ ಮಾಡುವ ರೈತರನ್ನು ಅರಣ್ಯ ಇಲಾಖೆಯವರು ಹತ್ತಾರು ಬಾರಿ  ಬಂಧಿಸಿದ್ದಾರೆ. ನೂರಾರು ಪ್ರಕರಣ ದಾಖಲಿಸಿ, ರೈತರಿಗೆ ಥಳಿಸಿದ್ದಾರೆ.

ರೈತ ಗಂಗಾಧರ್, ಸ್ಥಳೀಯ

Writer - ಅಝೀಝ್ ಕಿರುಗುಂದ

contributor

Editor - ಅಝೀಝ್ ಕಿರುಗುಂದ

contributor

Similar News