ಶಾಸಕರ ಅಮಾನತು ಪ್ರಕರಣ ವಿಚಾರಣೆ ಅ.4ಕ್ಕೆ ಮುಂದೂಡಿಕೆ

Update: 2017-09-20 10:10 GMT

ಚೆನ್ನೈ, ಸೆ.20: ಎಐಎಡಿಎಂಕೆಯ ಹದಿನೆಂಟು ಬಂಡಾಯ ಶಾಸಕರ ಅಮಾನತು ಅರ್ಜಿಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್ ಅಕ್ಟೋಬರ್ 4ಕ್ಕೆ ಮುಂದೂಡಿದ್ದು, ಇದೇ ವೇಳೆ  ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸರಕಾರದ ಬಹುಮತ ಸಾಬೀತಿಗೆ ತಡೆಯಾಜ್ಞೆಯನ್ನು  ವಿಸ್ತರಿಸಿದೆ.
ಹೈಕೋರ್ಟ್ ಆದೇಶದಿಂದಾಗಿ ಟಿಟಿವಿ ದಿನಕರನ್ ಬಳಗಕ್ಕೆ ತೀವ್ರ ಹಿನ್ನೆಡೆಯಾಗಿದೆ.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ದುರೈಸ್ವಾಮಿ ನೇತೃತ್ವದ ನ್ಯಾಯಪೀಠ ಮುಂದಿನ ಆದೇಶದವರೆಗೆ ತಮಿಳುನಾಡಿನಲ್ಲಿ ವಿಶ್ವಾಸಮತ ಯಾಚನೆ ನಡೆಸುವಂತಿಲ್ಲ ಎಂದು ಹೇಳಿದೆ.

ಇದೇ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಸ್ಪೀಕರ್ ಧನಪಾಲ್ ಮತ್ತು ಸಂ ಪುಟ ಕಾರ್ಯದರ್ಶಿ ಭೂಪತಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ವಕೀಲರಾದ ಸಲ್ಮಾನ್ ಖುರ್ಷಿದ್ ಮತ್ತು ದುಶ್ಯಂತ್ ದವೆ ಅವರು ರೆಬೆಲ್ ಶಾಸಕರ ಪರ ವಾದ ಮಂಡಿಸಿದರು.

ಕಳೆದ ಸೋಮವಾರ ತಮಿಳುನಾಡು ವಿಧಾನಸಭೆಯ ಸ್ಪೀಕರ್ ಕೆ. ಧನಪಾಲ್ ಆದೇಶ 18 ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಅನರ್ಹಗೊಂಡ ಶಾಸಕರು ಮದ್ರಾಸ್ ಹೈ ಕೋರ್ಟ್ ಮೆಟ್ಟಿಲೇರಿದ್ದರು. . 

ಸ್ಪೀಕರ್ ನಿರ್ಣಯ ಏಕಪಕ್ಷೀಯವಾಗಿದೆ. ಸರಕಾರ ಉಳಿಸುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶಾಸಕರು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಪಕ್ಷದ ನಾಯಕತ್ವದ ಬಗ್ಗೆ ಧ್ವನಿಯೆತ್ತಿದ್ದಾರೆ. ಮುಖ್ಯಮಂತ್ರಿ  ಎ.ಕೆ. ಪಳನಿಸ್ವಾಮಿ ಅವರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಇದರಿಂದ ಪಕ್ಷಾಂತರ ನಿಷೇಧ ಕಾಯ್ದೆ  ಉಲ್ಲಂಘನೆಯಾಗುವುದಿಲ್ಲ ಎಂದು ವಕೀಲರಾದ ದುಶ್ಯಂತ್ ದವೆ ವಾದ ಮಂಡಿಸಿದರು.

ಬಿಎಸ್ ಯಡಿಯೂರಪ್ಪ ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದಾಗ ನಡೆದ ಬಾಲಚಂದ್ರ ಜಾರಕಿಹೊಳಿ ಪ್ರಕರಣವನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಇದೇ ಸಂದರ್ಭದಲ್ಲಿ ವಿಪಕ್ಷ ಡಿಎಂಕೆ ಪರ ಕಪಿಲ್ ಸಿಬಲ್ ವಾದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News