ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಪರಮೇಶ್ವರ್ ಆಗ್ರಹ
ಬೆಂಗಳೂರು, ಸೆ.20: ಗ್ರಾಹಕರಿಗೆ ತೆರಿಗೆಯ ಹೊರೆ ತಪ್ಪಿಸಲು ಕೂಡಲೇ ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ಇದರಿಂದ ರಾಜ್ಯ ಸರಕಾರಗಳಿಗೆ ಆಗುವ ನಷ್ಟವನ್ನು ಕೇಂದ್ರ ಸರಕಾರವೇ ಭರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.
ಬುಧವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಕುಸಿದಿದೆ. ಆದರೆ ಕೇಂದ್ರ ಸರಕಾರ ಅಬಕಾರಿ ಶುಲ್ಕವನ್ನು ಪದೇ ಪದೇ ಏರಿಕೆ ಮಾಡುತ್ತಿರುವುದರಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ ಎಂದು ಹೇಳಿದರು.
ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ 48.82 ರೂ., ಬಾಂಗ್ಲಾದೇಶದಲ್ಲಿ 69 ರೂ., ಶ್ರೀಲಂಕಾದಲ್ಲಿ 49.08, ನೇಪಾಳದಲ್ಲಿ 61.08 ರೂ. ಇದೆ. ಆದರೆ ನಮ್ಮ ದೇಶದಲ್ಲಿ ನಾಲ್ಕು ವರ್ಷಗಳಿಂದ ಬೆಲೆ 71 ರೂ. ಅನುಪಾಸಿನಲ್ಲೇ ಇದೆ. ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರುವ ಮುನ್ನಾ 2014ರಲ್ಲಿ ಅಬಕಾರಿ ಶುಲ್ಕದ ಮೊತ್ತ ವಾರ್ಷಿಕವಾಗಿ 1,77,982 ಕೋಟಿ ರೂ. ಇತ್ತು. ಈ ಶುಲ್ಕ 2017ರಲ್ಲಿ 2,42,961 ಕೋಟಿ ರೂ.ಗೆ ಸಂಗ್ರಹವಾಗಿದೆ. ಒಂದು ಕಡೆ ಬ್ಯಾರೆಲ್ ಬೆಲೆ ಕಡಿಮೆ ಆಗುತ್ತಿದ್ದರೆ, ಇತ್ತ ಪೆಟ್ರೋಲ್ ಬೆಲೆ ಹೆಚ್ಚಿಸುವ ಮೂಲಕ ಜನರಿಂದ ಹಣ ವಸೂಲಿ ಮಾಡುತ್ತಿದೆ ಎಂದು ದೂರಿದರು.
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಡಿಸೇಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ ಶೇ.50ರಷ್ಟು ಕಡಿಮೆ ಆಗಲಿದೆ. ಈ ಕುರಿತು ಕೇಂದ್ರ ಇಂಧನ ಸಚಿವರೇ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತನ್ನಿ ಎಂದು ಮನವಿ ಮಾಡಿದ್ದಾರೆ. ಆದರೆ ಪ್ರಧಾನ ಮಂತ್ರಿ ಹಾಗೂ ಆರ್ಥಿಕ ಸಚಿವರು ಜನರಿಗೆ ಮಂಕುಬೂದಿ ಬಳಿದು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಪೆಟ್ರೋಲ್ ಖರೀದಿಸುವವರು ಹೊಟ್ಟೆಗಿಟ್ಟು ಇಲ್ಲದವರಲ್ಲ ಎಂದು ಪೆಟ್ರೋಲ್ ಬೆಲೆ ಏರಿಕೆ ಕುರಿತು ಕೇಂದ್ರ ಸಚಿವರು ಸಮರ್ಥಿಸಿಕೊಂಡಿದ್ದಾರೆ. ಮುಂದೆ ದಿನಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸುವವರು ನಡೆದು ಹೋಗಿ ಅಂಥ ಹೇಳಿ ‘ಆರೋಗ್ಯ ಭಾರತ್’ ಕಾರ್ಯಕ್ರಮವನ್ನು ಜಾರಿಗೆ ತರಬಹುದು ಎಂದು ಕೇಂದ್ರ ಸರಕಾರವನ್ನು ಲೇವಡಿ ಮಾಡಿದರು.
ಜಿಡಿಪಿ ಹಾಳು ಮಾಡಿದ ಕೇಂದ್ರ ಸರಕಾರ: ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರುವ ಮುನ್ನ ದೇಶದ ಜಿಡಿಪಿ 10.3 ರಷ್ಟಿತ್ತು. ನಂತರ ಪ್ರಧಾನಿ ಮೋದಿ ಕೈಗೊಂಡ ಆತುರದ ನಿರ್ಧಾರಗಳು ದೇಶದ ಜಿಡಿಪಿಯನ್ನು ಮೂರು ವರ್ಷಗಳಲ್ಲಿ 5.6ಗೆ ತಂದಿಳಿಸಿದೆ. ಇದೇ ಅವರ ಸಾಧನೆ. ಬಲಿಷ್ಠ ರಾಷ್ಟ್ರ ನಿರ್ಮಾಣದ ಹೆಸರಿನಲ್ಲಿ ಕೈಗೊಂಡ ನೋಟು ಅಮಾನ್ಯೀಕರಣ ದೇಶದ ಆರ್ಥಿಕ ಸ್ಥಿತಿಯನ್ನು ಸಂಪೂರ್ಣವಾಗಿ ಹಾಳು ಮಾಡಿದೆ. ಈ ನಡೆಯ ಕುರಿತು ಹಲವು ಆರ್ಥಿಕ ತಜ್ಞರು, ಆರ್‌ಬಿಐನ ಮಾಜಿ ಗೌವರ್ನರ್‌ಗಳು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಜವಾಬ್ದಾರಿ ಹೇಳಿಕೆ: ನಾವೂ ಯಾರು ಬಿಜೆಪಿ ನಾಯಕರ ಫೋನ್ ಕದ್ದಾಲಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಫೋನ್ ಕದ್ದಾಲಿಕೆ ಕುರಿತು ದಾಖಲೆಗಳಿದ್ದರೆ ಬಹಿರಂಗಗೊಳಿಸಲಿ. ಅದು ಬಿಟ್ಟು ಸರಕಾರದ ಮೇಲೆ ಆಧಾರವಿಲ್ಲದೆ ಗುಮಾನಿ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.