ಚೆನ್ನೈ-ಮೈಸೂರು ನಡುವೆ ಹೊಸ ವಿಮಾನಯಾನ ಆರಂಭ: ಸಚಿವ ಆರ್.ವಿ.ದೇಶಪಾಂಡೆ
ಬೆಂಗಳೂರು, ಸೆ.20: ಚೆನ್ನೈ-ಮೈಸೂರು-ಚೆನ್ನೈ ವಿಮಾನಯಾನ ಇಂದಿನಿಂದ ಪ್ರಾರಂಭವಾಗಿದ್ದು, ಸೆ.21ರಂದು ಹೈದರಾಬಾದ್-ವಿದ್ಯಾನಗರ(ಬಳ್ಳಾರಿ)- ಹೈದರಾಬಾದ್ ನಡುವಿನ ವಿಮಾನ ಸಂಪರ್ಕ ಸೇವೆಯು ಲೋಕಾರ್ಪಣೆಗೊಳ್ಳಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಬಹುದಿನಗಳ ನಿರೀಕ್ಷಿತ ಯೋಜನೆಯಾದ ಚೆನ್ನೈ-ಮೈಸೂರು-ಚೆನ್ನೈ ಮಾರ್ಗದ ವಿಮಾನಯಾನ ಸಂಪರ್ಕ ಯೋಜನೆ ಮತ್ತು ಹೈದರಾಬಾದ್-ವಿದ್ಯಾನಗರ (ಬಳ್ಳಾರಿ)-ಹೈದರಾಬಾದ್ ನಡುವಿನ ವಿಮಾನಯಾನ ಸಂಪರ್ಕ ಯೋಜನೆಗಳು ಈಗ ಸಾಕಾರಗೊಳ್ಳುತ್ತಿರುವುದು ನಾಡಿನ ಜನತೆಗೆ ತಿಳಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
ಈ ಎರಡೂ ಯೋಜನೆಗಳು ಕೇಂದ್ರದ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಮ್ಮ ಸರಕಾರದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಜಂಟಿ ಪ್ರಯತ್ನದ ಫಲಶ್ರುತಿಯಾಗಿದೆ. ಇವರೆಡೂ ನೂತನ ವಿಮಾನಯಾನ ಸೇವಾ ಸಂಪರ್ಕ ಸೌಲಭ್ಯಗಳಿಂದಾಗಿ ನಮ್ಮ ರಾಜ್ಯದ ಕೈಗಾರಿಕೆ, ಪ್ರವಾಸೋದ್ಯಮ, ವ್ಯಾಪಾರ ವಹಿವಾಟು, ಆರ್ಥಿಕ ಚಟುವಟಿಕೆ ಮತ್ತು ಸಂಚಾರ ಸಾಗಾಟ ಮುಂತಾದ ಅನೇಕ ಕ್ಷೇತ್ರಗಳಿಗೆ ಮತ್ತಷ್ಟು ಉತ್ತೇಜನ ಹಾಗೂ ಸೌಲಭ್ಯಗಳು ದೊರೆಯುವುದಲ್ಲದೆ ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದ ವಿವಿಧೆಡೆಗಳಿಗೆ ವಿಮಾನಯಾನ ಸೌಲಭ್ಯವನ್ನು ವಿಸ್ತರಿಸಿದಂತಾಗಿದೆ ಎಂದು ತಿಳಿಸಿದ್ದಾರೆ.
‘ಉಡಾನ್’ ಯೋಜನೆಯಡಿಯಲ್ಲಿ ಪ್ರಾದೇಶಿಕ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈ ಎರಡೂ ಮಹತ್ವದ ವಿಮಾನಯಾನ ಸೇವಾ ಸೌಲಭ್ಯ ಯೋಜನೆಗಳು ರಾಜ್ಯದಲ್ಲಿ ಜಾರಿಗೆ ಬರುವಲ್ಲಿ ನಮ್ಮ ಸರಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಪ್ರಯತ್ನವೂ ಉಲ್ಲೇಖಾರ್ಹ ಎಂದಿದ್ದಾರೆ.
ನಮ್ಮ ರಾಜ್ಯದಲ್ಲಿ ಹೆಚ್ಚಿನ ವಿಮಾನನಿಲ್ದಾಣಗಳನ್ನು, ಏರ್‌ಸ್ಟ್ರಿಪ್‌ಗಳನ್ನು ಮತ್ತು ಹೊಸ ಹೊಸ ವಿಮಾನಯಾನ ಮಾರ್ಗಗಳನ್ನು ಪ್ರಾರಂಭಿಸಬೇಕೆಂದು ಕಳೆದ 4 ವರ್ಷ ಗಳಿಂದಲೂ ನಮ್ಮ ಸರಕಾರವು ಸತತವಾಗಿ ಪ್ರಯತ್ನಿಸುತ್ತಿತ್ತು. ಇದಕ್ಕೆ ಸ್ಪಂದಿಸಿ ಈಗ ಎರಡು ನೂತನ ವಿಮಾನಯಾನ ಯೋಜನೆಗಳಿಗೆ ಕೇಂದ್ರದ ನಾಗರಿಕ ವಿಮಾನ ಯಾನ ಇಲಾಖೆಯು ಹಸಿರು ನಿಶಾನೆ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಉಪಕ್ರಮದಿಂದಾಗಿ ಜನಸಾಮಾನ್ಯರಿಗೂ ರಿಯಾಯಿತಿ ದರದಲ್ಲಿ ವಿಮಾನ ಪ್ರಯಾಣ ಕಲ್ಪಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಾದೇಶಿಕ ಸಂಪರ್ಕ ಯೋಜನೆಯಡಿಯಲ್ಲಿ ನಮ್ಮ ರಾಜ್ಯದಲ್ಲಿ ನಾಲ್ಕು ವಿಮಾನ ನಿಲ್ದಾಣಗಳನ್ನು ಮೊದಲನೆಯ ಸುತ್ತಿನ ಬಿಡ್ಡಿಂಗ್‌ನಲ್ಲಿ ಆಯ್ಕೆಮಾಡಲಾಗಿದೆ. ಮೈಸೂರು, ಬೀದರ್, ವಿದ್ಯಾನಗರ(ಬಳ್ಳಾರಿ) ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇವುಗಳಲ್ಲಿ ಸೇರಿವೆ. ಈ ಎಲ್ಲ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಮತ್ತು ಅಲ್ಲಿ ಕಾರ್ಯಚಟುವಟಿಕೆಗಳು ಆದಷ್ಟು ಬೇಗ ಪ್ರಾರಂಭವಾಗುವುದಕ್ಕೆ ನಮ್ಮ ಸರಕಾರವು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಮತ್ತು ನಾಗರಿಕ ವಿಮಾನಯಾನ ಇಲಾಖೆಗೆ ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣಗಳಿಗೆ ಅಗತ್ಯವಾದ ಭೂಮಿ, ವಿದ್ಯುತ್ ಸಂಪರ್ಕ, ನೀರಿನ ಸೌಲಭ್ಯ, ರಿಯಾಯಿತಿ ದರದಲ್ಲಿ ಇಂಧನ, ಭದ್ರತಾ ವ್ಯವಸ್ಥೆ ಮುಂತಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ನಮ್ಮ ಸರಕಾರವು ಒದಗಿಸಿದೆ. ನೂತನವಾಗಿ ಕಲಬುರಗಿ, ವಿಜಯಪುರ, ಹಾಸನ, ಬಳ್ಳಾರಿ, ಶಿವಮೊಗ್ಗ ಈ ಮುಂತಾದ ಕಡೆಗಳಲ್ಲಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ನಮ್ಮ ಸರಕಾರವು ಈಗಾಗಲೆ 89.29 ಕೋಟಿ ರೂ. 2017-18ನೆ ಸಾಲಿನ ಆಯವ್ಯಯದಲ್ಲಿ ಮೀಸಲಿಟ್ಟಿದೆ. ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಬೀದರ್ ಮುಂತಾದ ಕಡೆಗಳಲ್ಲಿ ಈಗಿರುವ ವಿಮಾನ ನಿಲ್ದಾಣಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ನಮ್ಮ ಸರಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಜೊತೆಗೆ ಚಿಕ್ಕಮಗಳೂರು, ಮಡಿಕೇರಿ ಮತ್ತು ಉತ್ತರ ಕನ್ನಡ(ಕುಮಟಾ)ದಲ್ಲಿ ಏರ್‌ಸ್ಟ್ರಿಪ್ಸ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಚಿಕ್ಕಮಗಳೂರಿನಲ್ಲಿ ಈ ಬಗ್ಗೆ ಈಗಾಗಲೇ ಅಗತ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಮಡಿಕೇರಿ ಮತ್ತು ಉತ್ತರ ಕನ್ನಡದ ಕುಮಟಾ ಸಮೀಪ ಏರ್‌ಸ್ಟ್ರಿಪ್ ನಿರ್ಮಾಣಕ್ಕಾಗಿ ಅಗತ್ಯ ಭೂಮಿಯನ್ನು ಗುರುತಿಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತಿದೆ. ಒಟ್ಟಾರೆ ದೇಶದ ವಿಮಾನಯಾನ ಸಂಪರ್ಕದ ಭೂಪಟದಲ್ಲಿ ನಮ್ಮ ರಾಜ್ಯಕ್ಕೆ ಪ್ರಮುಖ ಸ್ಥಾನವನ್ನು ದೊರಕಿಸಿಕೊಡಲು ಅಗತ್ಯವಾದ ಎಲ್ಲ ಕ್ರಮಗಳನ್ನು ನಮ್ಮ ಸರಕಾರವು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಮೂಲಕ ಕೈಗೊಳ್ಳುತ್ತಾ ಕಾರ್ಯ ತತ್ಪರವಾಗಿದೆ ಎಂದು ದೇಶಪಾಂಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.