ಮತ್ತೆ ನೆನಪಿಗೆ ಬಂದ ಕಿರಾತಕ

Update: 2017-09-20 18:42 GMT

ಮಾನ್ಯರೆ,

ಒಂಬತ್ತು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯನ್ನು ತನ್ನ ಕರಾಳ ಕೃತ್ಯಗಳಿಂದ ಬೆಚ್ಚಿಬೀಳಿಸಿದ್ದ ಸಯನೈಡ್ ಕಿಲ್ಲರ್ ಮೋಹನ್ ಕುಮಾರ್ ಇತ್ತೀಚೆಗೆ ಮಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ಆತನ ವಿರುದ್ಧ ಬಂದ ತೀರ್ಪಿನಿಂದ ಜನ ಮಾನಸದಲ್ಲಿ ದೆವ್ವದಂತೆ ಪುನಃ ಮೂಡಿ ಬಂದಿದ್ದಾನೆ.
ಜಿಲ್ಲೆಯ ಇತಿಹಾಸದಲ್ಲೇ ಕಂಡು ಕೇಳರಿಯದ ವಿನೂತನ ಶೈಲಿಯ ಕೊಲೆಗಳ ಸರಮಾಲೆಯಿಂದ ಮೋಹನ ಕುಮಾರ ಜನರನ್ನು ಭಯ ವಿಹ್ವಲಗೊಳಿಸಿ ಬಿಟ್ಟಿದ್ದ. ಒಂದಲ್ಲ ಎರಡಲ್ಲ ಇಪ್ಪತ್ತಕ್ಕಿಂತಲೂ ಅಧಿಕ ವಿವಾಹ ಯೋಗ್ಯ ಪ್ರಾಯದ ಅಬಲೆ ಹೆಂಗಳೆಯರನ್ನು ಮದುವೆಯಾಗುತ್ತೇನೆಂದು ಪುಸಲಾಯಿಸಿ, ವಂಚಿಸಿ-ಭೋಗಿಸಿ ಕೊನೆಗೆ ಸಯನೈಡ್ ಗುಳಿಗೆ ಕೊಟ್ಟು ಸಾರ್ವಜನಿಕ ಶೌಚಾಲಯದಲ್ಲಿ ಸಾಯಲು ಬಿಡುತ್ತಿದ್ದಂತಹ ಘಟನೆಗಳು ನಿಜಕ್ಕೂ ಮೈ ನಡುಕ ಬರಿಸುವಂತಿದೆ.
20 ಪ್ರಕರಣಗಳಲ್ಲಿ 3ರಲ್ಲಿ ಈಗಾಗಲೇ ಗಲ್ಲು ಶಿಕ್ಷೆ, ಇನ್ನೊಂದರಲ್ಲಿ ಜೀವಾವಧಿ ಶಿಕ್ಷೆಯನ್ನು ಪಡೆದಿರುವ ಈ ಕಿರಾತಕ ವೃತ್ತಿಯಲ್ಲಿ ಶಿಕ್ಷಕನಾಗಿದ್ದನು ಎಂಬುದನ್ನು ನೆನೆಸಿಕೊಂಡರೆ ಇನ್ನಷ್ಟು ರೇಜಿಗೆ ಹಿಡಿಸುತ್ತದೆ.
ವಕೀಲರನ್ನು ಬಳಸದೆ ತನ್ನ ಕೇಸನ್ನು ತಾನೇ ವಾದಿಸುವ ಈ ಭಯಾನಕ ಅಪರಾಧಿಯನ್ನು ಹಿಂಡಲಗಾ ಜ್ಯೆಲಿನಲ್ಲೇ ಇರಿಸಿಕೊಂಡು ಇನ್ನುಳಿದ ಪ್ರಕರಣಗಳ ವಿಚಾರಣೆಯನ್ನು ಬಾಬಾ ಗುರ್ಮೀತ್ ರಾಮ್-ರಹೀಂ ಸಿಂಗ್‌ನನ್ನು ರೋಹ್ಟಕ್ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಮಾಡಿದಂತೆ ಹಿಂಡಲಗಾದಲ್ಲೇ ಹಿಂಡುವುದು ಸೂಕ್ತ. ಯಾಕೆಂದರೆ ಪೊಲೀಸ್ ರಕ್ಷಣೆಯಲ್ಲಿ ಬೆಳಗಾವಿಯಿಂದ ಮಂಗಳೂರಿಗೆ ಬರುವಾಗ ಮದುಮಗನ ಹಾಗೆ ಪತ್ರಿಕೆಗಳಿಗೆ ಪೋಸ್ ಕೊಡುವುದರಿಂದ ನಮ್ಮ ನವಪೀಳಿಗೆಗೆ ಅವನ ದುಷ್ಟ ಕೃತ್ಯಗಳ ಬಗ್ಗೆ ಕುತೂಹಲ ಕೆರಳಿಸುವುದು ಸರಿಯಲ್ಲ. ಈ ಬಗ್ಗೆ ಸಂಬಂಧ ಪಟ್ಟವರು ಗಮನಿಸಲಿ.

Writer - -ಐ.ಎ.ಪಣಂಬೂರ್, ಕಾಟಿಪಳ್ಳ

contributor

Editor - -ಐ.ಎ.ಪಣಂಬೂರ್, ಕಾಟಿಪಳ್ಳ

contributor

Similar News