ಉದ್ಯೋಗದ ಅರ್ಜಿಯಲ್ಲಿ ಏಳು ತಪ್ಪು ಮಾಡಿದ್ದ ವ್ಯಕ್ತಿ ಅದೇ ಪ್ರತಿಷ್ಠಿತ ಕಂಪೆನಿಯ ಅಧ್ಯಕ್ಷನಾಗಿದ್ದು ಹೇಗೆ ?

Update: 2017-09-21 05:13 GMT

ಮುಂಬೈ, ಸೆ.21: ಪ್ರತಿಷ್ಠಿತ ಲಾರ್ಸೆನ್ ಆ್ಯಂಡ್ ಟಾಬ್ರೋ ಕಂಪೆನಿಯ ಅಧ್ಯಕ್ಷರಾಗಿ ಕಳೆದ 55 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 76 ವರ್ಷದ ಅನಿಲ್ ಮಣಿಭಾಯಿ ನಾಯ್ಕ್ ಅವರು ಓರ್ವ ಇಂಜಿನಿಯರಿಂಗ್ ಪದವೀಧರರಾಗಿ ಕಂಪೆನಿಗೆ ಸಾಮಾನ್ಯ ಹುದ್ದೆಯ ಮೂಲಕ ಪ್ರವೇಶಿಸಿ ಕಳೆದ 18 ವರ್ಷಗಳಿಂದ ಅದರ ಮುಖ್ಯಸ್ಥನಾಗಿ ಮುನ್ನಡೆಸುತ್ತಿರುವವರು. ಅವರು ತಮ್ಮ ಉದ್ಯೋಗ ಅರ್ಜಿಯಲ್ಲಿ ಏಳು ಸ್ಪೆಲ್ಲಿಂಗ್ ತಪ್ಪುಗಳನ್ನು ಮಾಡಿದವರೆಂದು ಹೇಳಿದರೆ ಯಾರಾದರೂ ನಂಬಬಹುದೇನು ? ಆದರೆ ಇದು ನಿಜ.

ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಜತೆ ಮಾತನಾಡಿದ ಅವರು, ಎಲ್ ಆ್ಯಂಡ್ ಟಿ ಉದ್ಯೋಗ ಸಂದರ್ಶನದ ಸಂದರ್ಭ ತಾನು ಮಾತನಾಡುವಾಗಲೂ ತಡವರಿಸುತ್ತಿದ್ದೆ ಎಂದಿದ್ದಾರೆ. ‘‘ನಿಮ್ಮ ಇಂಗ್ಲಿಷ್ ಇನ್ನೂ ಸ್ವಲ್ಪ ಉತ್ತಮಪಡಿಸಬಹುದೆಂದು ನಿಮಗೆ ಅನಿಸುವುದಿಲ್ಲವೇ ಎಂದ ಮ್ಯಾನೇಜರ್ ಹೇಳಿದಾಗ, ನಾನು ಹೌದು ಎಂದು ಹೇಳಿದೆ. ನನ್ನ ಉದ್ಯೋಗ ಅರ್ಜಿಯಲ್ಲಿ ಏಳು ಸ್ಪೆಲ್ಲಿಂಗ್ ದೋಷಗಳಿದ್ದವೆಂದೂ ನನಗೆ ತಿಳಿದಿತ್ತು’ ಎನ್ನುತ್ತಾರೆ ಅನಿಲ್ ಮಣಿಭಾಯಿ.

ಅಕ್ಟೋಬರ್ ತಿಂಗಳಲ್ಲಿ ನಿವೃತ್ತರಾಗಲಿರುವ ಅನಿಲ್ ಮಣಿಭಾಯಿ ತಾನೊಬ್ಬ ಐಐಟಿ ಪದವೀಧರನಾಗಿಲ್ಲದೇ ಇದ್ದುದರಿಂದ ತನಗೆ ಸಂದರ್ಶನಕ್ಕೆ ಕರೆ ಬಂದಿರಲಿಲ್ಲ ಎನ್ನುತ್ತಾರೆ. ‘‘ಆ ದಿನಗಳಲ್ಲಿ ಎಲ್ ಆ್ಯಂಡ್ ಟಿ ಕೇವಲ ಐಐಟಿ ಶಿಕ್ಷಣ ಪಡೆದವರನ್ನು ಮಾತ್ರ ನೇಮಿಸುತ್ತಿತ್ತು. ಅವರು ನನಗೆ ಸಂದರ್ಶನಕ್ಕೆ ಆಹ್ವಾನವಿತ್ತಿರಲಿಲ್ಲ. ನಾನು ನೆಸ್ಟರ್ ಬಾಯ್ಲರ್ ಗೆ ಹೋಗಿದ್ದೆ, ಅಲ್ಲಿ 18 ತಿಂಗಳು ಸೇವೆ ಸಲ್ಲಿಸಿದ ನಂತರ ನನಗೆ ದೊರಕಿದ ಅನುಭವ ಎಲ್ ಆ್ಯಂಡ್ ಟಿಗೆ ಸಾಕಾಗುವಷ್ಟಿತ್ತು. ಹೀಗೆ ನನಗೆ ಉದ್ಯೋಗ ದೊರೆಯಿತು’’ ಎನ್ನುತ್ತಾರೆ.

ತಾನು ಗ್ರಾಮದಲ್ಲಿ ಶಿಕ್ಷಣ ಪಡೆದವನಾಗಿದ್ದುದರಿಂದ ಮುಂಬೈಗೆ ಬಂದಾಗ ಜನರು ಅಪಹಾಸ್ಯ ಮಾಡಿದ್ದರು. ವಲ್ಲಭ್ ವಿದ್ಯಾನಗರ ಕಾಲೇಜಿಗೆ ಹೋಗುವಂತೆ ನನ್ನ ತಂದೆ ಹೇಳಿದ್ದರು. ನನ್ನ ಕಾಲೇಜಿನ ಶೇ.25ರಷ್ಟು ವಿದ್ಯಾರ್ಥಿಗಳು ಗುಜರಾತ್ ರಾಜ್ಯದವರಾಗಿಲ್ಲದೇ ಇದ್ದರೂ ಜನರು ಗುಜರಾತಿ ಮಾತನಾಡುತ್ತಿದ್ದರು. ಹೀಗೆ ಮುಂಬೈಗೆ ನಾನು ಬಂದಾಗ ಜನರೊಡನೆ ಸಂವಹನ ಕಷ್ಟವಾಗಿತ್ತು’’ ಎಂದು ಅವರು ನೆನೆನಪಿಸಿಕೊಳ್ಳುತ್ತಾರೆ.

ಸಂದರ್ಶನದಲ್ಲಿ ಮ್ಯಾನೇಜರ್ ನನ್ನ ಇಂಗ್ಲಿಷ್ ಸುಧಾರಿಸಬೇಕೆಂದು ಹೇಳಿದ್ದು ನನ್ನ ಮೇಲೆ ಪರಿಣಾಮ ಬೀರಿತು. ನಾನು ನಿಘಂಟು, ಕ್ಯಾಸೆಟ್ಟುಗಳನ್ನು ಖರೀದಿಸಿ ಇಂಗ್ಲಿಷ್ ಉಚ್ಚಾರಣೆ, ಸ್ಪೆಲ್ಲಿಂಗ್ ಕಲಿತೆ. ಕನ್ನಡಿಯೆದುರು ನಿಂತು ಇಂಗ್ಲಿಷ್ ಮಾತನಾಡುತ್ತಿದ್ದೆ. ನಾಲ್ಕು ವರ್ಷಗಳ ಸತತ ಪ್ರಯತ್ನದಿಂದ ಇಂಗ್ಲಿಷಿನಲ್ಲಿ ಪರಿಣತಿ ಸಾಧಿಸಿದೆ ಎನ್ನುತ್ತಾರೆ ಅನಿಲ್ ಮಣಿಭಾಯಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News