ಸೂಕ್ತ ಮ್ಯೂಚ್ಯುವಲ್ ಫಂಡ್ ಯೋಜನೆಗಳ ಆಯ್ಕೆ ಹೇಗೆ?

Update: 2017-09-21 08:32 GMT

ಬ್ಯಾಂಕುಗಳಲ್ಲಿ ಬಡ್ಡಿದರಗಳು ದಿನೇ ದಿನೇ ಕಡಿಮೆಯಾಗುತ್ತಿರುವುದರಿಂದ ಜನರ ಠೇವಣಿಗಳು ಲಾಭದಾಯಕವಲ್ಲ. ಹೀಗಾಗಿ ತಮ್ಮ ಉಳಿತಾಯದ ಹಣವನ್ನು ಬೆಳೆಸುವುದು ಹೇಗೆ ಎನ್ನುವುದರ ಬಗ್ಗೆ ಜನಸಾಮಾನ್ಯರು, ವಿಶೇಷವಾಗಿ ನಿವೃತ್ತರು ತಲೆಕೆಡಿಸಿಕೊಳ್ಳು ತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಶೇರು ಮಾರುಕಟ್ಟೆಗಳು ಅತ್ಯುತ್ತಮ ಸಾಧನೆ ಗಳನ್ನು ಪ್ರದರ್ಶಿಸುತ್ತಿವೆ. ಮುಂಬೈ ಶೇರು ವಿನಿಮಯ(ಬಿಎಸ್‌ಇ) ಕೇಂದ್ರದ ಸೂಚಿ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ದ ಸೂಚಿ ನಿಫ್ಟಿ ಪ್ರತಿವಾರವೂ ಹೊಸ ಎತ್ತರಕ್ಕೇರುತ್ತಿವೆ.

ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಜನರು ತೊಡಗಿಸುವ ಹಣದ ಬಹುಭಾಗ ಈಕ್ವಿಟಿ ಶೇರುಗಳಲ್ಲಿ ಹೂಡಿಕೆಯಾಗುತ್ತಿರುವುದರಿಂದ ಅವು ತಮ್ಮ ಗ್ರಾಹಕರಿಗೆ ಹೆಚ್ಚಿನ ಪ್ರತಿಫಲವನ್ನು ನೀಡುತ್ತಿವೆ. ಇವುಗಳಲ್ಲಿ ಹೂಡಿಕೆ ಬ್ಯಾಂಕ್ ಬಡ್ಡಿಗಳಿಗಿಂತ ಅಧಿಕ, ಅಂದರೆ ಕನಿಷ್ಠ ಶೇ.15-20ರಷ್ಟು ವಾರ್ಷಿಕ ಗಳಿಕೆ ನೀಡುತ್ತಿರುವುದರಿಂದ ಜನರು ಇವುಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಮ್ಯೂಚ್ಯುವಲ್ ಫಂಡ್‌ಗಳಿಗೆ ಹೂಡಿಕೆದಾರರಿಂದ ಪ್ರವಾಹದೋಪಾದಿಯಲ್ಲಿ ಹಣವು ಹರಿದುಬರುತ್ತಿದೆ. ಶೇರು ಮಾರುಕಟ್ಟೆಯ ಏರಿಳಿತಗಳು, ಕಂಪನಿಗಳ ವ್ಯವಹಾರ, ಅವುಗಳ ಆರ್ಥಿಕ ಸ್ಥಿತಿಗತಿ ಇತ್ಯಾದಿಗಳ ಬಗ್ಗೆ ಮಾಹಿತಿ ಇಲ್ಲದವರು ಈಕ್ವಿಟಿ ಶೇರುಗಳಲ್ಲಿ ನೇರವಾಗಿ ಹೂಡಿಕೆಯನ್ನು ಮಾಡುವುದು ಅಪಾಯಕಾರಿಯಾಗಬಹುದು.

ಮ್ಯೂಚ್ಯುವಲ್ ಫಂಡ್‌ಗಳಲ್ಲಿ ವೃತ್ತಿಪರ ಫಂಡ್ ಮ್ಯಾನೇಜರ್‌ಗಳಿದ್ದು, ಯಾವುದೇ ಕಂಪನಿಯ ಶೇರುಗಳನ್ನು ಖರೀದಿ ಮಾಡುವ ಮೊದಲು ಅದರ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಿರುತ್ತಾರೆ. ಅಲ್ಲದೆ ವಿವಿಧ ಕ್ಷೇತ್ರಗಳಿಗೆ ಸೇರಿದ ಕಂಪನಿಗಳ ಶೇರುಗಳನ್ನು ಖರೀದಿಸುವುದರಿಂದ ಯಾವುದೇ ಒಂದು ಕ್ಷೇತ್ರ ಕುಸಿದರೂ ಉಳಿದ ಕ್ಷೇತ್ರಗಳು ಹೆಚ್ಚಿನ ಹಾನಿಯಾಗದಂತೆ ತಡೆಯುತ್ತವೆ. ಇಂದು ಹೆಚ್ಚಿನ ಜನರು ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಹಣ ಹೂಡುತ್ತಿದ್ದಾರೆ. ಆದರೆ ಹೀಗೆ ಹಣ ಹೂಡುವ ಮುನ್ನ ನಿಮಗೆ ಯಾವ ಮ್ಯೂಚ್ಯುವಲ್ ಫಂಡ್ ಸೂಕ್ತ ಎನ್ನುವುದನ್ನು ತಿಳಿದುಕೊಳ್ಳುವುದು ಬಹು ಮುಖ್ಯವಾಗಿದೆ.

‘‘ನಾನು ಸರಿಯಾದ ಮ್ಯೂಚ್ಯುವಲ್ ಫಂಡ್ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆಯೇ’’ ಎನ್ನುವುದು ಮ್ಯೂಚ್ಯುವಲ್ ಫಂಡ್ ಫೋರಮ್‌ಗಳಲ್ಲಿ ಅತಿ ಹೆಚ್ಚು ಕೇಳುವ ಪ್ರಶ್ನೆಯಾಗಿದೆ. ನಿಮಗೂ ಇಂತಹ ಶಂಕೆಗಳಿದ್ದರೆ ನೀವು ಬೇರೆ ಯಾರನ್ನೂ ಕೇಳುವ ಅಗತ್ಯವಿಲ್ಲ.

ಸೂಕ್ತ ಮ್ಯೂಚ್ಯುವಲ್ ಫಂಡ್ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಲು ಕೆಲವು ಉಪಯುಕ್ತ ಟಿಪ್ಸ್‌ಗಳು ಇಲ್ಲಿವೆ......

ನೀವು ಆಯ್ದುಕೊಳ್ಳುವ ಯೋಜನೆಯು ನಿಮ್ಮ ಉದ್ದೇಶಕ್ಕೆ ಅನುಗುಣವಾಗಿರಬೇಕು. ಯೋಜನೆಯು ನಿಮ್ಮ ಹಣಕಾಸು ಗುರಿ, ಹೂಡಿಕೆಯ ಅವಧಿ ಮತ್ತು ಅಪಾಯದ ಅಂಶಗಳಿಗೆ ಹೊಂದಿಕೊಳ್ಳುತ್ತಿದ್ದರೆ ಮಾತ್ರ ಅದು ನಿಮಗೆ ಸೂಕ್ತವಾಗಬಹುದು. ಹೆಚ್ಚಿನ ಹೂಡಿಕೆದಾರರು ಪ್ರತಿಫಲ, ಸ್ಟಾರ್ ರೇಟಿಂಗ್ ಇವುಗಳ ಬಗ್ಗೆಯೇ ಗಮನ ಹರಿಸುತ್ತಾ ರೆಯೇ ಹೊರತು ಈ ಮಹತ್ವದ ಮಾನದಂಡಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಈ ತಪ್ಪನ್ನು ಎಂದಿಗೂ ಮಾಡಬೇಡಿ.

ಅಲ್ಪಾವಧಿಗಾಗಿ ಹೂಡಿಕೆ ಮಾಡಲು ನೀವು ಬಯಸುತ್ತೀರಾದರೆ ಬ್ಯಾಂಕ್ ಠೇವಣಿಗಳು ಮತ್ತು ಡೆಟ್ ಫಂಡ್‌ಗಳಂತಹ ಸುರಕ್ಷಿತ ಹೂಡಿಕೆ ಮಾರ್ಗಗಳಿಗೆ ಅಂಟಿಕೊಳ್ಳುವುದು ಒಳ್ಳೆಯದು. ಡೆಟ್ ಫಂಡ್‌ಗಳು ನಿಮಗೆ ಹಲವಾರು ಆಯ್ಕೆಗಳನ್ನು ನೀಡುತ್ತವೆ. ಯಾವಾಗಲೂ ನಿಮ್ಮ ಹೂಡಿಕೆಯ ಅವಧಿ ಮತ್ತು ನೀವು ತಡೆದುಕೊಳ್ಳಬಹುದಾದ ಅಪಾಯದ ಅಂಶಗಳಿಗೆ ಹೊಂದಿಕೊಳ್ಳುವ ಯೋಜನೆಯನ್ನೇ ಆಯ್ಕೆ ಮಾಡಿಕೊಳ್ಳಿ.

ಸರಿಯಾದ ಡೆಟ್ ಫಂಡ್ ಆಯ್ಕೆ ಮಾಡಿಕೊಳ್ಳುವುದು ತುಂಬ ಮುಖ್ಯವಾಗುತ್ತದೆ. ಕೆಲವು ದಿನಗಳಿಂದ ಹಿಡಿದು ಕೆಲವು ವಾರಗಳವರೆಗೆ ಹೂಡಿಕೆ ಮಾಡಲು ನೀವು ಬಯಸಿದ್ದರೆ ಲಿಕ್ವಿಡ್ ಫಂಡ್‌ಗಳನ್ನು ಆಯ್ದುಕೊಳ್ಳಿ. ಇವುಗಳನ್ನು ನೀವು ಯಾವಾಗ ಬೇಕಾದರೂ ನಗದೀಕರಿಸಬಹುದು. ಕೆಲವು ತಿಂಗಳುಗಳು ಅಥವಾ ಒಂದು ವರ್ಷದವರೆಗೆ ಹೂಡಿಕೆ ಮಾಡಲು ಬಯಸಿದ್ದರೆ ಅಲ್ಟ್ರಾ ಶಾರ್ಟ್ ಟರ್ಮ್ ಡೆಟ್ ಸ್ಕೀಮ್‌ಗಳನ್ನು ಆಯ್ದುಕೊಳ್ಳಿ. ಎರಡು ವರ್ಷಗಳ ಅವಧಿಗೆ ಹೂಡಿಕೆಯಾಗಿದ್ದರೆ ಶಾರ್ಟ್ ಟರ್ಮ್ ಸ್ಕೀಮ್ ಒಳ್ಳೆಯದು. ಮೂರು ವರ್ಷಗಳು ಅಥವಾ ಹೆಚ್ಚಿನ ಅವಧಿಗೆ ಹೂಡಿಕೆ ಮಾಡುತ್ತಿದ್ದರೆ ಡೈನಾಮಿಕ್ ಬಾಂಡ್ ಫಂಡ್‌ಗಳು ಅಥವಾ ದೀರ್ಘಾವಧಿಯ ಡೆಟ್ ಸ್ಕೀಮ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ನಿಮ್ಮ ಹಣಕಾಸು ಗುರಿಯನ್ನು ಈಡೇರಿಸಕೊಳ್ಳಲು ಐದರಿಂದ ಏಳು ವರ್ಷಗಳ ಅವಧಿ ನಿಮ್ಮ ಬಳಿಯಿದ್ದರೆ ನೀವು ಈಕ್ವಿಟಿ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ಈಕ್ವಿಟಿ ಯೋಜನೆಗಳು ಅಲ್ಪಾವಧಿಯಲ್ಲಿ ಮಾರುಕಟ್ಟೆಯ ಏರಿಳಿತಗಳಿಗೆ ಗುರಿಯಾಗಬಹುದು. ಆದರೆ ದೀರ್ಘಾವಧಿಯಲ್ಲಿ ಅವು ಇತರ ಎಲ್ಲ ಹೂಡಿಕೆಗಳಿಗಿಂತ ಅತ್ಯುತ್ತಮ ಪ್ರತಿಫಲ ಗಳನ್ನು ನೀಡುತ್ತವೆ.

ಅಪಾಯದ ಅಂಶಗಳನ್ನು ಕಡೆಗಣಿಸಬೇಡಿ

ಹೆಚ್ಚಿನ ಹೂಡಿಕೆದಾರರಿಗೆ ತಾವು ತಡೆದುಕೊಳ್ಳಬಹುದಾದ ಅಪಾಯಗಳ ಬಗ್ಗೆ ಹೆಚ್ಚಿಗೆ ಗೊತ್ತಿರುವುದಿಲ್ಲ. ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಸುಖವಾದ ನಿದ್ರೆಯೂ ಬರುತ್ತಿಲ್ಲ ಎನ್ನುವಾಗಲಷ್ಟೇ ಅವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ಹೀಗಾಗಲು ಬಿಡಬೇಡಿ. ಮಾರುಕಟ್ಟೆಯಲ್ಲಿನ ಏರಿಳಿತಗಳನ್ನು ಎದುರಿಸುವ ಧೈರ್ಯವಿಲ್ಲದಿದ್ದರೆ ಡೆಟ್ ಮತ್ತು ಈಕ್ವಿಟಿ ವರ್ಗಗಳಲ್ಲಿ ತುಲನಾತ್ಮಕವಾಗಿ ಸುರಕ್ಷಿತ ಆಯ್ಕೆಗಳನ್ನೇ ಮಾಡಿಕೊಳ್ಳಿ.

ಸಂಭಾವ್ಯ ಹೆಚ್ಚಿನ ಅಪಾಯವನ್ನು ಜೀರ್ಣಿಸಿಕೊಳ್ಳುವ ತಾಕತ್ತು ಮತ್ತು ಏಳರಿಂದ ಹತ್ತು ವರ್ಷಗಳ ಹೂಡಿಕೆ ಅವಧಿ ನಿಮಗಿದ್ದರೆ ಮಾತ್ರ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಯೋಜನೆಗಳನ್ನು ಆಯ್ದುಕೊಳ್ಳಿ. ಇವು ನಷ್ಟವನ್ನೂ ಮಾಡಬಲ್ಲವು, ಭಾರೀ ಲಾಭವನ್ನೂ ನೀಡಬಲ್ಲವು. ಇಲ್ಲದಿದ್ದರೆ ಮಲ್ಟಿಕ್ಯಾಪ್,ಲಾರ್ಜ್ ಕ್ಯಾಪ್ ಮತ್ತು ಈಕ್ವಿಟಿ ಓರಿಯಂಟೆಡ್ ಹೈಬ್ರಿಡ್ ಸ್ಕೀಮ್‌ನಂತಹ ಸುರಕ್ಷಿತ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News