ಮುಖ್ಯಮಂತ್ರಿ, ಗೃಹ ಸಚಿವರಿಗೆ ‘ಲೇಖನಿ ರಕ್ಷಿಸಿ’ ಮನವಿ

Update: 2017-09-21 13:12 GMT

ಬೆಂಗಳೂರು, ಸೆ. 21: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಂತಕರನ್ನು ಕೂಡಲೇ ಬಂಧಿಸಿ, ಭಯ ಮುಕ್ತ ವಾತಾವರಣ ನಿರ್ಮಿಸಬೇಕೆಂದು ಆಗ್ರಹಿಸಿ ‘ಲೇಖನಿ ರಕ್ಷಿಸಿ’ ಆಂದೋಲನದ ಅಂಗವಾಗಿ ಪ್ರೊ.ಚಂಪಾ ನೇತೃತ್ವದಲ್ಲಿ ಸಾಹಿತಿಗಳು, ಚಿಂತಕರು ಹಾಗೂ ಹೋರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿಗೆ ‘ಲೇಖನಿ’ಯೊಂದಿಗೆ ಮನವಿ ಸಲ್ಲಿಸಿದರು.

ಗುರುವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರೊ.ಚಂಪಾ ಹಾಗೂ ವಿಧಾನಸೌಧದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಬಸವರಾಜ ಸೂಳಿಭಾವಿ ಮತ್ತು ಪ್ರೊ.ಶಿವರಾಮಯ್ಯ ನೇತೃತ್ವದ ಸಾಹಿತಿ-ಹೋರಾಟಗಾರರ ನಿಯೋಗ ‘ಲೇಖನಿ’ಯ ಮನವಿ ಸಲ್ಲಿಸಿತು.

ರಾಜ್ಯ ಹಾಗೂ ದೇಶದಲ್ಲಿ ವಿಚಾರವಾದಿಗಳು, ಲೇಖಕರಿಗೆ ಮುಕ್ತ ವಾತಾವರಣ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅಭಿಪ್ರಾಯ ಸ್ವತಂತ್ರವಿದ್ದು, ಅದನ್ನು ಸಂವಿಧಾನವೂ ಎತ್ತಿ ಹಿಡಿದಿದೆ. ಆದರೆ, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್, ಪನ್ಸಾರೆ, ದಾಭೋಲ್ಕರ್ ಹತ್ಯೆ ಪ್ರಕರಣಗಳು ಆತಂಕ ಸೃಷ್ಟಿಸಿವೆ. ಆದುದರಿಂದ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಕಲಬುರ್ಗಿ ಹತ್ಯೆ ಪ್ರಕರಣ ಹಂತಕರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಅಲ್ಲದೆ, ರಾಜ್ಯದಲ್ಲಿ ಭಯ ಮುಕ್ತ ವಾತಾವರಣ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಹಿತಿಗಳು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ವೇಳೆ ಮಾತನಾಡಿದ ಸಾಹಿತಿಗಳು, ‘ನಾವು ತಮಗೆ ಲೇಖನಿ ಸಲ್ಲಿಸುತ್ತಿರುವುದರ ಅರ್ಥ ನಾವು ಬರವಣಿಗೆಯನ್ನು ಸ್ಥಗಿತಗೊಳಿಸುತ್ತೇವೆ ಎಂದಲ್ಲ. ನಮ್ಮ ಪೆನ್ನು ಗನ್ನಿಗೆ ಬೆದರಿದೆ ಎಂದಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಧನವಾದ ಈ ಲೇಖನಿಗೆ ಭದ್ರತೆ ಒದಗಿಸುವುದು ಸರಕಾರದ ಕರ್ತವ್ಯ ಎಂಬುದನ್ನು ನೆನಪಿಸಲು ಈ ಲೇಖನಿ ಸಲ್ಲಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ‘ಸಿಟ್’ಗೆ ವಹಿಸಬೇಕು. ಲೇಖಕರಿಗೆ ಅಗತ್ಯ ಭದ್ರತೆ ಒದಗಿಸಬೇಕು. ಪ್ರಚೋದನಕಾರಿ ಭಾಷಣ ಮಾಡುವ ಜಗದೀಶ್ ಕಾರಂತ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶಾಂತಿ-ಸುವ್ಯವಸ್ಥೆ ಕದಡುವ ಮತೀಯ ಸಂಘಟನೆಗಳ ಮಿಲಿಟರಿ ತರಬೇತಿಗೆ ಕಡಿವಾಣ ಹಾಕಬೇಕು ಎಂದು ಸಾಹಿತಿ ಬಸವರಾಜ ಸೂಳಿಭಾವಿ ಒತ್ತಾಯಿಸಿದರು.

ರಾಜ್ಯಾದ್ಯಂತ ಲೇಖನಿ ಸಲ್ಲಿಕೆ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಂತಕರ ಬಂಧನ ಹಾಗೂ ಭಯ ಮುಕ್ತ ವಾತಾವರಣ ನಿರ್ಮಾಣಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ಲೇಖಕ ಸರಜೂ ಕಾಟ್ಕರ್, ಹೊಸಪೇಟೆಯಲ್ಲಿ ಪ್ರೊ.ರಹಮತ್ ತರೀಕೆರೆ ಹಾಗೂ ಕೊಪ್ಪಳದಲ್ಲಿ ಪಂಪಾರೆಡ್ಡಿ ನೇತೃತ್ವದಲ್ಲಿ ಸಾಹಿತಿಗಳು, ವಿಚಾರವಾದಿಗಳು ಹಾಗೂ ಹೋರಾಟಗಾರರು ಜಿಲ್ಲಾಧಿಕಾರಿ, ತಹಶೀಲ್ದಾರರಿಗೆ ‘ಲೇಖನಿ’ಯೊಂದಿಗೆ ಮನವಿ ಸಲ್ಲಿಸಲಾಯಿತು.

ಪ್ರೊ.ಚಂಪಾ, ಪ್ರೊ.ಶಿವರಾಮಯ್ಯ, ಶ್ರೀಪಾದ ಭಟ್, ಕೆ.ಎಲ್.ಅಶೋಕ್, ಡಾ.ಬಂಜಗೆರೆ ಜಯಪ್ರಕಾಶ್, ಬಸವರಾಜ ಸೂಳಿಭಾವಿ, ಮಂಗ್ಳೂರು ವಿಜಯ, ಪ್ರೊ ಎ.ಎಸ್.ಪ್ರಭಾಕರ್, ನವೀನ್ ಸೂರಿಂಜೆ, ಸಂಗಮೇಶ ಮೆಣಸಿನಕಾಯಿ, ಹನುಮಂತ ಹಾಲಿಗೇರಿ, ಅನಂತ ನಾಯ್ಕೊ, ರುಕ್ಮೀಣಿ ಸೇರಿದಂತೆ ಇನ್ನಿತರರು ನಿಯೋಗದಲ್ಲಿದ್ದರು.

ಗೌರಿ ಲಂಕೇಶ್ ಹತ್ಯೆಯ ಹಂತಕರ ತ್ವರಿತಗತಿ ಬಂಧನಕ್ಕೆ ಕ್ರಮ ವಹಿಸಲಾಗುವುದು. ಸಾಹಿತಿಗಳಿಗೆ ಭದ್ರತೆ ಕಲ್ಪಿಸಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಪ್ರಚೋದನಕಾರಿ ಭಾಷಣ ಮಾಡಿದ ಜಗದೀಶ್ ಕಾರಂತ್ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಶಾಂತಿ ಕದಡುವ ಮತೀಯ ಸಂಘಟನೆಗಳ ನಿಗ್ರಹಕ್ಕೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
-ರಾಮಲಿಂಗಾರೆಡ್ಡಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News