ಕಾಂಗ್ರೆಸ್ ಮುಖಂಡರಿಗೆ ಬಿಜೆಪಿ ಬ್ಲ್ಯಾಕ್‌ ಮೇಲ್: ದಿನೇಶ್‌ ಗುಂಡೂರಾವ್

Update: 2017-09-21 13:41 GMT

ಬೆಂಗಳೂರು, ಸೆ.21: ಬಿಜೆಪಿಯವರು ಕಾಂಗ್ರೆಸ್ ಮುಖಂಡರಿಗೆ ಬ್ಲ್ಯಾಕ್‌ ಮೇಲ್ ಮಾಡುವ ಮೂಲಕ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಆಹ್ವಾನವನ್ನು ತಿರಸ್ಕರಿಸುವ ಕಾಂಗ್ರೆಸ್ ಮುಖಂಡರಿಗೆ ಬೇರೆ ಬೇರೆ ರೀತಿಯಲ್ಲಿ ಸಿಕ್ಕಿ ಹಾಕಿಸಿ, ಬ್ಲ್ಯಾಕ್‌ ಮೇಲ್ ಮೂಲಕ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರಿಗೂ ಹೀಗೆಯೆ ಬಿಜೆಪಿ ನಾಯಕರು ಬ್ಲ್ಯಾಕ್‌ ಮೇಲ್ ಮಾಡಿರಬಹುದು. ಅದರ ಪರಿಣಾಮವಾಗಿಯೆ ಅವರು ಬಿಜೆಪಿಗೆ ಸೇರ್ಪಡೆಗೊಂಡರು. ಈಗ ಎಸ್.ಎಂ.ಕೃಷ್ಣರಿಂದ ಪಕ್ಷಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಅರಿತಿರುವ ಬಿಜೆಪಿ ನಾಯಕರು, ಕೃಷ್ಣ ಅವರ ಅಳಿಯ ಸಿದ್ಧಾರ್ಥಗೆ ಸೇರಿದ ಮನೆ, ಕಚೇರಿ, ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ನಡೆಸಿದ್ದಾರೆ ಎಂದು ಅವರು ಕಿಡಿಗಾರಿದರು.

ಇದೇ ರೀತಿಯಲ್ಲಿ ಕಾಂಗ್ರೆಸ್‌ನ ಇನ್ನೂ ಹಲವು ನಾಯಕರಿಗೆ ಬಿಜೆಪಿ ಬ್ಲ್ಯಾಕ್‌ಮೇಲ್ ಮಾಡುತ್ತಿದೆ. ಬಿಜೆಪಿಯವರು ಕಾಂಗ್ರೆಸ್‌ನವರನ್ನೆ ಗುರಿಯನ್ನಾಗಿಸಿಕೊಂಡು ಆದಾಯ ತೆರಿಗೆ ಇಲಾಖೆಯ ದಾಳಿ ಮಾಡಿಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದಾಗಲೂ ಎಸ್.ಎಂ.ಕೃಷ್ಣರನ್ನು ಕಡೆಗಣಿಸಲಾಗಿತ್ತು ಎಂದು ದಿನೇಶ್‌ಗುಂಡೂರಾವ್ ದೂರಿದರು.

‘ಬಿಬಿಎಂಪಿ’ ಕಾಂಗ್ರೆಸ್-ಜೆಡಿಎಸ್ ಮೈತ್ರಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುಂದುವರೆಯಲಿದೆ ಎಂದು ತಿಳಿಸಿದರು.

ಬಿಬಿಎಂಪಿ ಮೈತ್ರಿ ಕುರಿತು ಕುಮಾರಸ್ವಾಮಿ ಜೊತೆ ಒಳ್ಳೆಯ ರೀತಿಯಲ್ಲಿ ಮಾತುಕತೆ ನಡೆದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುಂದುವರೆಯಲಿದೆ. ಜೆಡಿಎಸ್ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಈ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗುವುದು ಎಂದರು.

ಮೇಯರ್ ಯಾರಾಗಬೇಕೆಂದು ಕಾಂಗ್ರೆಸ್ ನಿರ್ಧರಿಸಲಿದೆ. ಉಪ ಮೇಯರ್ ಬಗ್ಗೆ ಜೆಡಿಎಸ್ ನಿರ್ಧಾರ ಕೈಗೊಳ್ಳಲಿದೆ. ನಗರದ ಸಚಿವರು, ಸಂಸದರು, ಶಾಸಕರು ಸಭೆ ಸೇರಿ ಮೇಯರ್ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚೆ ನಡೆಸಿ ಸರ್ವಾನುಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದೇವೆ ಎಂದು ಹೇಳಿದರು.

ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಅನಾರೋಗ್ಯಕ್ಕೆ ಒಳಗಾಗಿರುವ ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ದೇವೆ. ಬಿಬಿಎಂಪಿ ಮೈತ್ರಿ ವಿಚಾರದ ಕುರಿತು ಚರ್ಚಿಸಲಾಗಿದೆ. ಅವರು ಕೆಲವು ಸ್ಥಾಯಿ ಸಮಿತಿಗಳ ಬದಲಾವಣೆ ಮಾಡುವಂತೆ ತಿಳಿಸಿದ್ದಾರೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News