ಸೆ.23ರಿಂದ ‘ಮನೆ ಮನೆಗೆ ಕಾಂಗ್ರೆಸ್’ ಅಭಿಯಾನ: ಡಾ.ಜಿ.ಪರಮೇಶ್ವರ್

Update: 2017-09-21 14:07 GMT

ಬೆಂಗಳೂರು, ಸೆ.21: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕಳೆದ ನಾಲ್ಕು ವರ್ಷದಲ್ಲಿ ಮಾಡಿರುವ ಸಾಧನೆಗಳ ಪಟ್ಟಿಯನ್ನು ಮತದಾರರ ಮನೆಗಳಿಗೆ ತಲುಪಿಸಿ, ಆ ಮೂಲಕ ಚುನಾವಣೆಯ ಪ್ರಚಾರಕ್ಕೆ ಮುನ್ನುಡಿ ಬರೆಯಲು ‘ಮನೆ ಮನೆಗೆ ಕಾಂಗ್ರೆಸ್’ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಗುರುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯ ಶೇ.95ರಷ್ಟು ಅಂಶಗಳನ್ನು ಈಡೇರಿಸಿದ್ದೇವೆ. ನಾವು ಮಾಡಿರುವ ಜನಪರ ಕಾರ್ಯಕ್ರಮಗಳನ್ನು ಕೃತಿ ರೂಪದಲ್ಲಿ ಹೊರತಂದಿದ್ದೇವೆ. ಅದನ್ನು ಜನತೆಗೆ ಮುಟ್ಟಿಸಲು ‘ಮನೆ ಮನೆಗೆ ಕಾಂಗ್ರೆಸ್’ ಆಂದೋಲನ ರೂಪಿಸಲಾಗಿದೆ ಎಂದು ಹೇಳಿದರು.

2013ರ ಚುನಾವಣಾ ಪ್ರಚಾರದ ವೇಳೆ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿದ್ದ ಕಾಂಗ್ರೆಸ್, ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಪಂಚಾಯತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಅಭಿಯಾನವನ್ನು ಆಯೋಜಿಸಿದ್ದೆವು. ಈ ಅಭಿಯಾನದ ಫಲವಾಗಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಗೆಲುವು ಸಾಧಿಸಿತ್ತು. ಅದೇ ರೀತಿಯಲ್ಲಿ ಈ ಬಾರಿವು ಕಾಂಗ್ರೆಸ್‌ನ ಸಾಧನೆಗಳನ್ನು ಮನೆ ಮನೆಗೆ ತಲುಪಿಸಲು ಅಭಿಯಾನ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅಭಿಯಾನಕ್ಕೆ 6 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು: ‘ಮನೆ ಮನೆಗೆ ಕಾಂಗ್ರೆಸ್’ ಅಭಿಯಾನಕ್ಕೆ ಬೂತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ 54261 ಬೂತ್‌ಗಳಿದ್ದು, ಎಲ್ಲ ಬೂತ್‌ಗಳಲ್ಲಿಯೂ ಕಾಂಗ್ರೆಸ್ ಬೂತ್ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಸದಸ್ಯರು ‘ಮನೆ ಮನೆಗೆ ಕಾಂಗ್ರೆಸ್’ ಎಂಬ ಸಾಧನಾ ಕೃತಿಯನ್ನು ತಮ್ಮ ಬೂತ್‌ನಲ್ಲಿರುವ ಮನೆಗಳಿಗೆ ತಲುಪಿಸುತ್ತಾರೆ ಎಂದು ಅವರು ಹೇಳಿದರು.

ಮುಖ್ಯಾಂಶಗಳು:
-ಮನೆ ಮನೆಗೆ ಕಾಂಗ್ರೆಸ್ ಕಿರು ಹೊತ್ತಿಗೆ ಮೂಲಕ ಅಭಿಯಾನ
-ಸೆ.23ರಿಂದ ಅಕ್ಟೋಬರ್ 15ರವರೆಗೆ ಅಭಿಯಾನ
-224 ಕ್ಷೇತ್ರದ 54261 ಬೂತ್‌ಗಳಲ್ಲಿ ಅಭಿಯಾನ
-ಬೂತ್ ಮಟ್ಟದಲ್ಲಿ 10ರಿಂದ 15 ಸದಸ್ಯರಿಂದ ಪ್ರಚಾರ
-ಚುನಾವಣೆ ಮುಗಿಯವವರೆಗೆ ಬೂತ್ ಸಮಿತಿಗಳು ಸಕ್ರಿಯ
-ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆ

ಮನೆ ಮನೆಗೆ ಕಾಂಗ್ರೆಸ್ ಎಂಬ ಅಭಿಯಾನವು ಸೆ.23ರಿಂದ ಅ.15ವರೆಗೆ ನಡೆಯಲಿದ್ದು, ನಗರದ ಮಹದೇವಪುರ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅದೇ ದಿನ ರಾಜ್ಯದ 224 ಕ್ಷ್ರೇತ್ರಗಳಲ್ಲಿಯೂ ಚಾಲನೆಯಾಗಲಿದೆ.
-ಡಾ.ಜಿ.ಪರಮೇಶ್ವರ್, ಅಧ್ಯಕ್ಷ ಕೆಪಿಸಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News