ವಿವಿಗಳ ಬೋಧಕೇತರಿಗೆ ವೇತನ ನೀಡುವಂತೆ ಆಗ್ರಹ
ಬೆಂಗಳೂರು, ಸೆ.21: ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿರುವ ಬೋಧಕೇತರ ನೌಕರ ವರ್ಗದವರಿಗೆ ಯುಜಿಸಿ ಶ್ರೇಣಿಯಂತೆ ವೇತನ ನೀಡುವಂತೆ ಅಖಿಲ ಭಾರತ ವಿಶ್ವವಿದ್ಯಾನಿಲಯ ಶಿಕ್ಷಕೇತರ ನೌಕರರ ಕಾನ್‌ಫೇಡರೇಶನ್ ಮಹಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಸಜ್ಜನ್ ಒತ್ತಾಯಿಸಿದ್ದಾರೆ.
ಗುರುವಾರ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಶಿಕ್ಷಕೇತರ ನೌಕರರ ಒಕ್ಕೂಟ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿವಿಗಳಲ್ಲಿ ಬೋಧಕ- ಬೋಧಕೇತರ ವರ್ಗದ ಸಾವಿರಾರು ನೌಕರರು ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಬೋಧಕ ವರ್ಗಕ್ಕೆ ಯುಜಿಸಿ, ಕೇಂದ್ರ ಸರಕಾರಿ ನೌಕರರ ವೇತನಕ್ಕೆ ಸರಿ ಸಮಾನ ವೇತನ ನೀಡದೆ, ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಒಕ್ಕೂಟದ ಅಧ್ಯಕ್ಷ ಶಂಕರ್ ಮಾತನಾಡಿ, 2008ನೆ ಸಾಲಿನಲ್ಲಿ ಕೇಂದ್ರ ಸರಕಾರ ಯುಜಿಸಿ ವೇತನ ಶ್ರೇಣಿಯನ್ನು ವಿವಿಗಳಿಗೆ ಅಳವಡಿಸಿಕೊಳ್ಳಲು ನಿಯಮಾವಳಿಗಳನ್ನು ರೂಪಿಸಿದ್ದು, ಇದರಲ್ಲಿ ಬೋಧಕೇತರ ನೌಕರ ವರ್ಗದವರಿಗೂ ಸಹ ಯುಜಿಸಿ ವೇತನ ಶ್ರೇಣಿ ಅಳವಡಿಸಿಕೊಳ್ಳವುದಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ, ಅಂದಿನಿಂದ ಇದುವರೆಗೂ ರಾಜ್ಯ ಸರಕಾರ ಯುಜಿಸಿ ವೇತನ ಶ್ರೇಣಿಯನ್ನು ಅಳವಡಿಸಿಕೊಳ್ಳಲು ಅನುಮತಿ ನೀಡಿದೆ ಅನ್ಯಾಯ ಮಾಡಿದೆ ಎಂದರು.
ಆಯೋಗಕ್ಕೆ ಮನವಿ: ಕರ್ನಾಟಕದ 6ನೆ ವೇತನ ಆಯೋಗದ ಆಯುಕ್ತರಿಗೆ ವಿವಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕೇತರ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ ಎಂದ ಅವರು, ರಾಜ್ಯದ ಪೊಲೀಸ್ ಇಲಾಖೆ, ಲೋಕೋಪಯೋಗಿ, ವಿದ್ಯುತ್ ನಿಗಮ, ಬಿಎಂಟಿಸಿ ನೌಕರರ ವೇತನ ಶ್ರೇಣಿ ಮಾದರಿಯಲ್ಲೇ, ವಿವಿಗಳ ಬೋಧಕೇತರ ನೌಕರರಿಗೆ ವೇತನ ನೀಡುವಂತೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಗೌರವ ಅಧ್ಯಕ್ಷ ಮಹಾಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಶ್ರೀಕಾಂತ್, ಆರ್.ಎಸ್.ಹೊಸಮಠ, ಮೈಸೂರು ವಿವಿಯ ಕಾಂತರಾಜು, ಎಸ್.ಮಹದೇವಪ್ಪಸೇರಿ ಪ್ರಮುಖರಿದ್ದರು.