×
Ad

ಉಕ್ತಲೇಖನ ಪ್ರಕ್ರಿಯೆಯನ್ನು ಶುಕ್ರವಾರಕ್ಕೆ ಮುಂದೂಡಿದ ಹೈಕೋರ್ಟ್

Update: 2017-09-21 20:47 IST

ಬೆಂಗಳೂರು, ಸೆ.21: ಡಾ.ಕೆ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ವಶಪಡಿಸಿಕೊಂಡ ಜಮೀನು ಡಿ-ನೋಟಿಫಿಕೇಶನ್ ಮಾಡಿದ ಆರೋಪ ಸಂಬಂಧ ತಮ್ಮ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿದ ಎರಡು ಎಫ್‌ಐಆರ್‌ಗಳಿಗೆ ತಡೆಯಾಜ್ಞೆ ನೀಡಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿರುವ ಮಧ್ಯಂತರ ಮನವಿ ಕುರಿತು ತೀರ್ಪಿನ ಉಕ್ತಲೇಖನ ಪ್ರಕ್ರಿಯೆಯನ್ನು ಹೈಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಪ್ರತ್ಯೇಕ ಎರಡು ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಪ್ರತ್ಯೇಕ ಎರಡು ತಕರಾರು ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಅರ್ಜಿಗಳ ಇತ್ಯರ್ಥಪಡಿಸುವರೆಗೆ ಎಫ್‌ಐಆರ್ ಮತ್ತು ಎಸಿಬಿ ತನಿಖೆಗೆ ತಡೆಯಾಜ್ಞೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದರು.

ಕಳೆದ ಹಲವು ದಿನಗಳಿಂದ ಮಧ್ಯಂತರ ಮನವಿ ಕುರಿತು ಯಡಿಯೂರಪ್ಪ ಪರ ವಕೀಲರ ವಾದ ಮತ್ತು ಎಸಿಬಿ ಪರ ವಕೀಲರ ಪ್ರತಿವಾದವನ್ನು ಹೈಕೋರ್ಟ್ ಆಲಿಸಿತ್ತು. ಬುಧವಾರ ವಾದ-ಪ್ರತಿವಾದ ಮುಕ್ತಾಯಗೊಂಡಿತ್ತು. ನ್ಯಾಯಮೂರ್ತಿ ಅರವಿಂದ ಕುಮಾರ್ ಅವರ ಏಕಸದಸ್ಯ ಪೀಠವು, ಗುರುವಾರ ಬೆಳಗ್ಗೆ ಕಲಾಪದಲ್ಲಿ ತೆರೆದ ನ್ಯಾಯಾಲಯದಲ್ಲಿ ತೀರ್ಪನ್ನು ಉಕ್ತ ಲೇಖನ ಪ್ರಕ್ರಿಯೆ ಆರಂಭಿಸಿದರು. ಆದರೆ, ಸಂಜೆ ಕಲಾಪದ ಅವಧಿ ಮುಗಿದರೂ ತೀರ್ಪು ಪೂರ್ಣಗೊಳ್ಳದ ಕಾರಣ, ಶುಕ್ರವಾರ ತೀರ್ಪಿನ ಉಳಿದ ಭಾಗವನ್ನು ಬರೆಯಿಸುವುದಾಗಿ ನ್ಯಾಯಮೂರ್ತಿಗಳು ತಿಳಿಸಿದರು.

ಭಾಗಶಃ ತೀರ್ಪು ಬರೆಯಿಸಲಾಗಿದ್ದು, ಶುಕ್ರವಾರ ಬೆಳಗಿನ ಕಲಾಪ ಮುಗಿಯುವುದರೊಳಗೆ ತೀರ್ಪು ಪ್ರಕಟವು ಪೂರ್ಣಗೊಳ್ಳುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News