×
Ad

ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ವಿರುದ್ಧದ ಸಮನ್ಸ್‌ಗೆ ಹೈಕೋರ್ಟ್ ತಡೆ

Update: 2017-09-21 20:55 IST

ಬೆಂಗಳೂರು, ಸೆ.21: ಅಧಿಕಾರಿಗಳಿಗೆ ಲಂಚ ಪಡೆಯಲು ಕುಮ್ಮಕ್ಕು ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್‌ಗೆ ಮೈಸೂರು ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್‌ಗೆ ಹೈಕೋರ್ಟ್ ತಡೆ ನೀಡಿದೆ.

ಈ ಸಂಬಂಧ ಸಮನ್ಸ್‌ಗೆ ತಡೆ ಕೋರಿ ಸುನೀಲ್ ಬೋಸ್ ಮತ್ತು ಬೋಸ್ ಸ್ನೇಹಿತ ರಾಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್‌ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ಎರಡನೆ ಆರೋಪಿಯಾಗಿರುವ ಸುನೀಲ್ ಬೋಸ್, ಮೂರನೆ ಆರೋಪಿಯಾಗಿರುವ ಬೋಸ್ ಸ್ನೇಹಿತ ರಾಜು ವಿರುದ್ಧ ಯಾವುದೇ ಬಲವಾದ ಸಾಕ್ಷಿಗಳು ಇಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು ಇವರ ವಿರುದ್ಧ ಮೈಸೂರು ನ್ಯಾಯಾಲಯ ಜಾರಿಗೊಳಿಸಿರುವ ಸಮನ್ಸ್‌ಗೆ ತಡೆ ನೀಡಿತು.

ಪ್ರಕರಣವೇನು: 2010ರಲ್ಲಿ ಭೂ ವಿಜ್ಞಾನ ಇಲಾಖೆ ಅಧಿಕಾರಿ ಅಲ್ಫೋಸಿಸ್‌ಗೆ ಲಂಚ ಪಡೆಯಲು ಸಚಿವರ ಪುತ್ರ ಸುನೀಲ್ ಬೋಸ್ ಪ್ರೇರೇಪಿಸಿದ್ದರು ಎನ್ನುವ ಆರೋಪವಿದ್ದು, 2013ರಲ್ಲಿ ವಿಚಾರಣೆ ನಡೆಸಿದ ಲೋಕಾಯುಕ್ತರು ಸುನೀಲ್ ಬೋಸ್ ಮತ್ತು ರಾಜು ಹೆಸರನ್ನು ಕೈ ಬಿಟ್ಟಿದ್ದರು. ಆದರೆ, ಇಬ್ಬರನ್ನು ಆರೋಪಿಗಳಾಗಿ ಪರಿಗಣಿಸಬೇಕೆಂದು ದೂರುದಾರ ಬಸವರಾಜು ನ್ಯಾಯಾಲಯದ ಮೊರೆ ಹೋಗಿದ್ದರು.

ಸೆಪ್ಟೆಂಬರ್ 7ರಂದು ಬಸವರಾಜು ಅರ್ಜಿ ಪುರಸ್ಕರಿಸಿದ ಮೈಸೂರಿನ 3ನೆ ಜೆಎಂಎಫ್ ನ್ಯಾಯಾಲಯ, ಪ್ರಕರಣದಲ್ಲಿ ಸುನೀಲ್ ಬೋಸ್ ಎರಡನೆ ಆರೋಪಿಯಾಗಿ, ಮೂರನೆ ಆರೋಪಿಯಾಗಿ ಬೋಸ್ ಗೆಳೆಯ ರಾಜುನನ್ನು ಪರಿಗಣಿಸಿತ್ತು. ಅಲ್ಲದೆ, ಮೈಸೂರಿನ ನ್ಯಾಯಾಲಯವು ಸುನೀಲ್ ಬೋಸ್ ಹಾಗೂ ರಾಜುಗೆ ಸೆಪ್ಟೆಂಬರ್ 9ರ ಶನಿವಾರ ಕೋರ್ಟ್‌ಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಸಮನ್ಸ್‌ಗೆ ತಡೆ ನೀಡಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಗುರುವಾರ ಸಮನ್ಸ್‌ಗೆ ತಡೆ ನೀಡಿ ಆದೇಶ ಹೊರಡಿಸಿದೆ.

ಅರ್ಜಿದಾರರ ಪರ ಹೈಕೋರ್ಟ್ ವಕೀಲ ಅಯ್ಯಪ್ಪ ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News