ನೀರುಗಾಲುವೆ ಕಾಮಗಾರಿ ಪ್ರದೇಶಕ್ಕೆ ಸಚಿವ ಕೆ.ಜೆ.ಜಾರ್ಜ್ ಭೇಟಿ, ಪರಿಶೀಲನೆ
ಬೆಂಗಳೂರು, ಸೆ. 21: ಗೋವಿಂದರಾಜ ನಗರ ಕ್ಷೇತ್ರ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಬಿಬಿಎಂಪಿ ಮೇಯರ್ ಪದ್ಮಾವತಿ, ಆ ಕ್ಷೇತ್ರ ವ್ಯಾಪ್ತಿಯಲ್ಲಿನ ಪ್ರಗತಿಯಲ್ಲಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಕಾಮಾಕ್ಷಿಪಾಳ್ಯದ ಸಮೀಪದ ಚೆನ್ನಪ್ಪ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಸದರಿ ಕೈಗಾರಿಕಾ ಬಡಾವಣೆಯ ಸ್ಥಿತಿಯನ್ನು ಗಮನಿಸಿ, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲು ಸೂಚಿಸಿದರು. ಅದರಂತೆ 36.5 ಕೋಟಿ ರೂ.ವೆಚ್ಚದಲ್ಲಿ ರಸ್ತೆ, ಪಾದಚಾರಿ, ಒಳಚರಂಡಿಗಳ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲು ವಿಶೇಷ ಅನುದಾನವನ್ನು ಕೂಡಲೇ ಒದಗಿಸುವುದು ಎಂದು ಅವರು ತಿಳಿಸಿದರು.
ಅನಂತರ ವಿಜಯನಗರ ಕ್ಷೇತ್ರದ ಆರ್‌ಪಿಸಿ ಬಡಾವಣೆಯಲ್ಲಿ ಬೃಹತ್ ನೀರುಗಾಲುವೆ ತೀವ್ರ ಮಳೆಯ ನೀರಿನ ಒತ್ತಡದಿಂದ ಕುಸಿದಿದ್ದು, ಸದರಿ ಬೃಹತ್ ನೀರುಗಾಲುವೆಯನ್ನು ಮರು ನಿರ್ಮಿಸಿ, ಸುತ್ತಮುತ್ತಲಿನ ಮನೆಗಳಿಗೆ ನೀರು ಹರಿಯುವುದನ್ನು ತಡೆಯುವಂತೆ ದುರಸ್ಥಿಗೆ ಆದೇಶ ನೀಡಿದರು.
ಇಲ್ಲಿನ ಶಾಮಣ್ಣ ಗಾರ್ಡನ್ ರೈಲ್ವೆ ಗೇಟ್‌ನ ಪೈಪ್‌ಲೈನ್ ಹತ್ತಿರ ಇರುವ ಬೃಹತ್ ನೀರುಗಾಲುವೆಗಳ ಪರಿಶೀಲನೆ ಮಾಡಿ ಆದ ಅನಾಹುತಗಳನ್ನು ಪರಿಶೀಲಿಸಿದರು. ಪೈಪ್ ಲೈನ್ ನಿವಾಸಿಗಳು ಅಲ್ಲಿನ ತೊಂದರೆಗಳನ್ನು ಸಚಿವರಿಗೆ ವಿವರಿಸಿದ್ದು, ಈ ಬೃಹತ್ ನೀರುಗಾಲುವೆಯಿಂದ ಬಹುತೇಕ ಮನೆಗಳಿಗೆ ನೀರು ನುಗ್ಗಿದಲ್ಲದೆ ಮನೆಗಳ ಅಡಿಪಾಯವು ಹಾಳಾಗಿದ್ದು ಮನೆಗಳು ಯಾವುದೇ ಸಂದರ್ಭದಲ್ಲಿಯು ಬೀಳುವ ಸಂಭವವಿರುತ್ತದೆ ಎಂದು ತಿಳಿಸಿದರು.
ಇದಕ್ಕೆ ಸ್ಪಂದಿಸಿದ ಕೆ.ಜೆ.ಜಾರ್ಜ್, ಸದರಿ ಕಾರ್ಯಕ್ಕೆ ಹೆಚ್ಚುವರಿಯಾಗಿ ತಲಾ 10 ಕೋಟಿ ರೂ.ಗಳಂತೆ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಿ ಕಾಮಗಾರಿ ಪ್ರಾರಂಭಿಸಲು ಸೂಚಿಸಿದ್ದೇನೆ. ಅದರಂತೆ, ಎರಡು ಸ್ಥಳಗಳ ಬೃಹತ್ ನೀರು ಗಾಲುವೆಗಳ ಕಾಮಗಾರಿಗೆ 20ಕೋಟಿ ರೂ.ಹಣವನ್ನು ವಿಶೇಷ ಅನುದಾನದಡಿ ಬೃಹತ್ ನೀರುಗಾಲುವೆ ಕಾಮಗಾರಿಯ ಅಭಿವೃದ್ಧಿಗೆ ನೀಡಲಾಗುವುದೆಂದು ತಿಳಿಸಿದರು.
ಅಲ್ಲಿನ ನಿವಾಸಿಗಳಿಗೆ ಬೇರೆ ಕಡೆ ವಸತಿ ಮನೆಗಳನ್ನು ನೀಡಲು ಕ್ರಮ ವಹಿಸಲು ಸೂಚಿಸಿ, ಅರ್ಹರಿಗೆ ರಿಯಾಯಿತಿ ದರದಲ್ಲಿ ಕೆ.ಎಚ್.ಬಿಯ ಮನೆಗಳನ್ನು ಒದಗಿಸಲು ಕ್ರಮ ವಹಿಸುವಂತೆ ಆದೇಶಿಸಿದರು.
ಈ ವೇಳೆ ವಸತಿ ಸಚಿವ ಕೃಷ್ಣಪ್ಪ, ಸ್ಥಳೀಯ ಶಾಸಕ ಪ್ರಿಯಾಕೃಷ್ಣ, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ಹಾಜರಿದ್ದರು.