×
Ad

ಎನ್‌ಜಿಒಗಳ ಜೊತೆಗಿನ ಒಪ್ಪಂದ ರದ್ದುಪಡಿಸಲು ಆಗ್ರಹ

Update: 2017-09-21 21:30 IST

ಬೆಂಗಳೂರು, ಸೆ. 21: ಖಾಸಗಿ ಸಂಘ ಸಂಸ್ಥೆ(ಎನ್‌ಜಿಒ)ಗಳೊಂದಿಗೆ ಶಿಕ್ಷಣ ಇಲಾಖೆ ಮಾಡಿಕೊಂಡಿರುವ ನೂತನ ಒಪ್ಪಂದ ರದ್ದುಪಡಿಸಬೇಕು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಸಮಾನ ಶಿಕ್ಷಣ್ಕಾಗಿ ಸಮನ್ವಯ ವೇದಿಕೆ ಆಗ್ರಹಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ಕಳೆದ ಎರಡು ಶತಮಾನಗಳಿಂದ ಶೈಕ್ಷಣಿಕ ಸಮಾನತೆಗಾಗಿ ದುಡಿಯುತ್ತಿದ್ದರೂ ಇಂದಿಗೂ ಶಿಕ್ಷಣ ಮರೀಚಿಕೆಯಾಗಿದೆ. ಸಮಾಜದಲ್ಲಿ ಅಸಮಾನತೆಯ ಪಿಡುಗು ವ್ಯಾಪಿಸುತ್ತಿದೆ. ಸಮಾಜವಾದ ಸಿದ್ಧಾಂತಕ್ಕೆ ಬದ್ಧರಾದವರೂ ಖಾಸಗೀಕರಣದ ಕಡೆಗೆ ಸಾಗುತ್ತಿದ್ದಾರೆ. ಇದರಿಂದಾಗಿ ಸಮಾನ ಶಿಕ್ಷಣ ಆಶಯವನ್ನು ಅನುಷ್ಠಾನಗೊಳಿಸಬೇಕಾದ ಸರಕಾರಗಳು ಖಾಸಗೀಕರಣದತ್ತ ಮುಖ ಮಾಡಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ವರಿಗೂ ಸಮಾನ ಶಿಕ್ಷಣದ ಕನಸು ಬರಿ ಕನಸಾಗಿಯೇ ಉಳಿಯುವ ಆತಂಕ ಎದುರಾಗಿದೆ. ಕಾರ್ಪರೇಟ್ ವಲಯದೊಂದಿಗೆ ಕೈಜೋಡಿಸಿ ಶಿಕ್ಷಣವನ್ನು ಮಾರಾಟ ಮಾಡಲಾಗುತ್ತಿದೆ. ಶಿಕ್ಷಣದ ವ್ಯಾಪಾರೀಕರಣ ತೊಲಗಬೇಕು. ರಾಜ್ಯದಲ್ಲಿನ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಸದೃಢಗೊಳಿಸಬೇಕು. ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ, ಸವಲತ್ತುಗಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವರದಿಯ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆ ಸಂಚಾಲಕ ಶ್ರೀಪಾದ ಭಟ್ ಮಾತನಾಡಿ, ಸಚಿವ ತನ್ವೀರ್ ಸೇಠ್ ಇತ್ತೀಚಿಗೆ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಜೀಂ ಪ್ರೇಮ್‌ಜೀ ಪ್ರತಿಷ್ಠಾನ, ಪ್ರಥಮ್ ಪ್ರತಿಷ್ಠಾನ, ಖಾನ್ ಅಕಾಡಮಿ ಹಾಗೂ ಶಿಕ್ಷಣ ಪ್ರತಿಷ್ಠಾನದೊಂದಿಗೆ ನೂತನ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಖಾಸಗೀಕರಣಕ್ಕೆ ಒತ್ತು ನೀಡಿ ಸರಕಾರಿ ಶಾಲೆಗಳನ್ನು ನಿರ್ನಾಮ ಮಾಡಲು ಹೊರಟಿದ್ದಾರೆ. ಸರಕಾರಿ ಶಾಲೆಗಳಿಗೆ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲದಿದ್ದರೂ, ಸಾವಿರಾರು ರೂ.ಗಳು ಖರ್ಚು ಮಾಡಿ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದಲ್ಲಿ ಒಂದು ಕಡೆಗೆ ಶಿಕ್ಷಣದ ಸಬಲೀಕರಣಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ. ಮತ್ತೊಂದು ಕಡೆ ಶಿಕ್ಷಣ ಇಲಾಖೆಯನ್ನು ಕ್ರಮವಾಗಿ ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ. ಪ್ರಸ್ತುತ ದಿನಗಳಲ್ಲಿನ ಸಮಸ್ಯೆಗಳಾಗಿ ತಲೆದೋರಿರುವ ಕೋಮುವಾದ, ಜಾತಿ ತಾರತಮ್ಯ ನಮ್ಮ ಕಲಿಕಾ ಪದ್ಧತಿಯ ದೋಷಗಳಾಗಿವೆ. ಇದನ್ನು ತೊಲಗಿಸಬೇಕಾದರೆ ಸರಕಾರಿ ಶಾಲೆಗಳನ್ನು ಉನ್ನತೀಕರಿಸಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಶಿಕ್ಷಣ ಇಲಾಖೆಯಲ್ಲಿರುವ ಮಾನವ ಸಂಪನ್ಮೂಲವನ್ನೇ ಉಪಯೋಗಿಸಿಕೊಂಡು ಸರಕಾರಿ ಶಾಲೆಗಳನ್ನು ಬಲಪಡಿಸುವತ್ತ ಗಮನಹರಿಸಬೇಕು. ಆದರೆ, ಪ್ರಾಧಿಕಾರದ ವರದಿ ಬಗ್ಗೆ ಧ್ವನಿ ಎತ್ತದ ಸಚಿವರು, ಒಪ್ಪಂದಗಳನ್ನು ಹೆಚ್ಚೆಚ್ಚು ಪ್ರಚುರ ಪಡಿಸುವಲ್ಲಿ ನಿರತರಾಗಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸುಗಳನ್ನು ಈ ಕೂಡಲೇ ಜಾರಿಗೊಳಿಸಬೇಕು. ಸರಕಾರೇತರ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಎಂಸಿ ಸಮನ್ವಯ ವೇದಿಕೆ ಮುಖಂಡ ಕುಮಾರ್ ಹಾಗೂ ಮುತ್ತುರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News