ಶಿವಾಜಿನಗರದಲ್ಲಿ ಅಕ್ರಮ ಕಸಾಯಿ ಖಾನೆ ಕಾರ್ಯ ನಿರ್ವಹಿಸುತ್ತಿಲ್ಲ: ಹೈಕೋರ್ಟ್‌ಗೆ ವರದಿ ಸಲ್ಲಿಸಿದ ಸರಕಾರ

Update: 2017-09-21 16:15 GMT

ಬೆಂಗಳೂರು, ಸೆ.21: ನಗರದ ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವೊಂದು ಅಕ್ರಮ ಕಸಾಯಿ ಖಾನೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ರಾಜ್ಯ ಸರಕಾರ ಗುರುವಾರ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.  

ಬೆಂಗಳೂರು ನಗರವೊಂದರಲ್ಲೇ 27 ಕಸಾಯಿ ಖಾನೆಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಗೋ ಗ್ಯಾನ್ ಫೌಂಡೇಶನ್ ಎಂಬ ಸ್ವಯಂ ಸೇವಾ ಸಂಘ ಬುಧವಾರ ಹೈಕೋರ್ಟ್‌ಗೆ ವರದಿಯೊಂದನ್ನು ಸಲ್ಲಿಸಿತ್ತು. ಇದನ್ನು ಪರಿಗಣಿಸಿದ್ದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಪೀಠ, ಅಕ್ರಮವಾಗಿ ತಲೆ ಎತ್ತಿರುವ ಅಕ್ರಮ ಕಸಾಯಿ ಖಾನೆಗಳನ್ನು ಗುರುತಿಸಿ, ಅವುಗಳ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ತಪ್ಪದೇ ಪ್ರಗತಿ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿತ್ತು. ಅದರಂತೆ ಗುರುವಾರ ರಾಜ್ಯ ಹೆಚ್ಚುವರಿ ಸರಕಾರಿ ಅಭಿಯೋಜಕ ಸಂದೇಶ್ ಚೌಟ ಅವರು, ಶಿವಾಜಿನಗರ ಠಾಣಾಧಿಕಾರಿ ನೀಡಿದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದರು.

ಶಿವಾಜಿನಗರದ ವ್ಯಾಪ್ತಿಯಲ್ಲಿ ಸುಮಾರು ಆರು ಕಡೆ ಪರಿಶೀಲನೆ ನಡೆಸಲಾಗಿದೆ. ಆ ಪೈಕಿ ಎಲ್ಲೂ ಅಕ್ರಮ ಕಸಾಯಿ ಖಾನೆಯಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಅಕ್ರಮ ಕಸಾಯಿ ಖಾನೆಗಳಿವೆ ಎಂಬುದರ ಬಗ್ಗೆ ನಿಮಗೆ ಮಾಹಿತಿ ಇದೆಯೋ, ಆ ಸ್ಥಳಗಳ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಅರ್ಜಿದಾರರ ಗೋ ಗ್ಯಾನ್ ಫೌಂಡೇಶನ್‌ಗೆ ನಿರ್ದೇಶಿಸಿ ವಿಚಾರಣೆಯನ್ನು ಅ.4ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News