ಭಿಕ್ಷಾಟನೆಯಲ್ಲಿ ತೊಡಗಿದ್ದವರ ರಕ್ಷಣೆ
ಬೆಂಗಳೂರು, ಸೆ.21: ನಗರದ ಪ್ರಮುಖ ಭಾಗಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಸುಮಾರು 2 ರಿಂದ 13 ವರ್ಷ ಪ್ರಾಯದ ಹನ್ನೆರಡು ಮಕ್ಕಳು ಹಾಗೂ ಏಳು ಜನ ಮಂಗಳಾಮುಖಿಯರು ಸೇರಿ ಒಟ್ಟು 53 ಜನರನ್ನು ನಗರದ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ರಕ್ಷಿಸಿದ್ದಾರೆ.
ಗುರುವಾರ ನಗರದ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಾರ್ವಜನಿಕರ ಸಹಕಾರದಿಂದ ಮಕ್ಕಳ, ಮಂಗಳಾಮುಖಿಯರ ಹಾಗೂ 34 ಜನರ ಚಲನವಲನಗಳನ್ನು ಗಮನಿಸಿ ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡಿರುವುದನ್ನು ದಾಖಲೆ ಸಹಿತ ಮಾಹಿತಿ ಸಂಗ್ರಹಿಸಲಾಯಿತು.
ಭಿಕ್ಷಾಟನೆಯಿಂದ ರಕ್ಷಿಸಿರುವ ಮಕ್ಕಳು ಸೇರಿ 53 ಜನರಿಗೂ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ ಎಂದು ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.
341 ಪ್ರಕರಣ ದಾಖಲು: ಶಾಲೆ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಹಾಗೂ ಸಾರ್ವಜನಿಕವಾಗಿ ಧೂಮಪಾನ ಮಾಡಿದ್ದ ಆರೋಪದ ಮೇಲೆ ನಗರದ ವೈಟ್‌ಫೀಲ್ಡ್ ವಿಭಾಗದ ಪೊಲೀಸರು 341 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.