×
Ad

ಯಶವಂತಪುರ-ದಾಬಸ್‌ಪೇಟೆ ನೂತನ ಬಸ್ ಮಾರ್ಗಕ್ಕೆ ಸಚಿವ ರೇವಣ್ಣ ಚಾಲನೆ

Update: 2017-09-21 21:53 IST

ಬೆಂಗಳೂರು, ಸೆ.21: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಯಶವಂತಪುರದಿಂದ ದಾಬಸ್‌ಪೇಟೆ ಕೈಗಾರಿಕಾ ಬಡವಣೆಗೆ ನೂತನ ಬಸ್ ಮಾರ್ಗಕ್ಕೆ  ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಚಾಲನೆ ನೀಡಿದರು.

ಗುರುವಾರ ದಾಬಸ್‌ ಪೇಟೆ ಕೈಗಾರಿಕಾ ಬಡಾವಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಬಸ್ ಮಾರ್ಗಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ದಾಬಸ್‌ ಪೇಟೆ ಬೆಂಗಳೂರಿನಿಂದ 45 ಕಿಮೀ ದೂರವಿದೆ. ಈ ಪ್ರದೇಶದಲ್ಲಿ ಸುಮಾರು 500ಕ್ಕೂ ಹೆಚ್ಚು ವಿವಿಧ ಕಾರ್ಖಾನೆ, ಕೈಗಾರಿಕೆಗಳಿರುವುದರಿಂದ ಬಸ್ ಮಾರ್ಗ ಅಗತ್ಯವಿತ್ತು ಎಂದು ತಿಳಿಸಿದರು.

ದಾಬಸ್‌ಪೇಟೆ ಪ್ರದೇಶದಲ್ಲಿ ನಗರದ ಸುತ್ತಮುತ್ತಲಿನಿಂದ ಪ್ರತಿನಿತ್ಯ ಸುಮಾರು 25ರಿಂದ 30ಸಾವಿರಕ್ಕೂ ಹೆಚ್ಚು ಕಾರ್ಮಿಕರು ಸಂಚರಿಸುತ್ತಾರೆ. ಹೀಗಾಗಿ ಕಾರ್ಮಿಕರು ಹಾಗೂ ಇಲ್ಲಿನ ನಿವಾಸಿಗಳಿಂದ ನೂತನ ಬಸ್ ಮಾರ್ಗಕ್ಕೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಇಂದಿನಿಂದಲೇ ನೂತನವಾಗಿ 3ಮಾರ್ಗಗಳಲ್ಲಿ ಬಿಎಂಟಿಸಿ ಬಸ್‌ಗಳು ಕಾರ್ಯಾಚರಿಸಲಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ, ಶಾಸಕ ಡಾ.ಕೆ.ಶ್ರೀನಿವಾಸ ಮೂರ್ತಿ, ಬಿಎಂಟಿಸಿ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಗೋವಿಂದರಾಜು, ಬಿಎಂಟಿಸಿ ಭದ್ರತಾ ಹಾಗೂ ಜಾಗೃತಿ ವಿಭಾಗದ ನಿರ್ದೇಶಕ ಡಾ.ಪ್ರಕಾಶಗೌಡ, ಪರಿಷತ್ ಸದಸ್ಯ ಎಸ್.ರವಿ ಮತ್ತಿತರರಿದ್ದರು.

ನೂತನ ಮಾರ್ಗಗಳು: ನೂತನ ಬಸ್ ಮಾರ್ಗ 258-ಡಿಎನ್ ಸಂಖ್ಯೆಯ 3 ಅನುಸೂಚಿಗಳನ್ನು ಯಶವಂತಪುರದಿಂದ ವರ್ಣ ಪ್ಯಾಕ್ಟರಿ(ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ) ಹಾಗೂ ಕೆಬಿಎಸ್ ನಿಂದ ದಾಬಸ್‌ಪೇಟೆಗೆ ವಯಾ ಜಾಲಹಳ್ಳಿ ಕ್ರಾಸ್- ಅಂಚೆಪಾಳ್ಯ-ನೆಲಮಂಗಳ-ತೊಣಚಿಕುಪ್ಪೆ-ಟಿ.ಬೇಗೂರು-ದೊಡ್ಡೇರಿ-ಕತ್ತಿಗನೂರು-ಕೆಂಪೋಹಳ್ಳಿ -ಎಂ.ವಿ.ಸೋಲಾರ್ ಮಾರ್ಗವಾಗಿ ಒಟ್ಟು 6 ಸುತ್ತುವಳಿಗಳನ್ನು ಪ್ರತಿ ಅರ್ಧ ಗಂಟೆಯ ಅಂತರದಲ್ಲಿ ಬೆಳಗ್ಗೆ 6ರಿಂದ ಸಂಜೆ 4.30ರವರೆಗೆ ಕಾರ್ಯಾಚರಣೆ ನಡೆಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News