ತನಿಖೆಗೂ ಮೊದಲು ಆರೋಪ ಸರಿಯಲ್ಲ: ಚೇತನ್‌ರಾಜ್ ಹಂಸ

Update: 2017-09-21 16:27 GMT

ಬೆಂಗಳೂರು, ಸೆ. 21: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸೂಕ್ತ ತನಿಖೆ ನಡೆಸಿ ಕೃತ್ಯ ಎಸಗಿದವರಿಗೆ ಶಿಕ್ಷೆ ನೀಡಲಿ. ಆದರೆ, ತನಿಖೆಗೆ ಮೊದಲೇ ಯಾರ ಮೇಲೂ ಆರೋಪ ಹೊರಿಸುವುದು ಸರಿಯಲ್ಲ ಎಂದು ಸನಾತನ ಸಂಸ್ಥೆಯ ವಕ್ತಾರ ಚೇತನ್ ರಾಜ್ ಹಂಸ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್‌ರ ಹತ್ಯೆ ಪ್ರಕರಣ ರಾಜ್ಯ ಸರಕಾರ ನೇಮಿಸಿರುವ ವಿಶೇಷ ತನಿಖಾ ದಳದಿಂದ ತನಿಖೆ ನಡೆಯುತ್ತಿದೆ. ಆದರೆ, ತನಿಖೆ ಪೂರ್ಣವಾಗುವ ಮೊದಲೇ ಸನಾತನ ಸಂಸ್ಥೆ ಹಾಗೂ ಹಿಂದೂ ಸಂಘಟನೆಗಳ ಮೇಲೆ ಆರೋಪ ಮಾಡಲಾಗುತ್ತಿದೆ. ಅಲ್ಲದೆ, ಎಸ್‌ಐಟಿ ಅಧಿಕಾರಿಗಳ ತಂಡ ಸನಾತನ ಆಶ್ರಮಕ್ಕೆ ಭೇಟಿ ವಿಚಾರಣೆ ನಡೆಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ. ಆದರೆ, ನಮ್ಮ ಆಶ್ರಮಕ್ಕೆ ಯಾವುದೇ ಪೊಲೀಸ್ ತಂಡ ಪ್ರವೇಶಿಸಿಲ್ಲ ಎಂದು ಹೇಳಿದರು.

ದೇಶದಲ್ಲಿ ಈ ಹಿಂದೆ ನಡೆದಿರುವ ಮಲೆಂಗಾವ್ ಬಾಂಬ್ ಸ್ಫೋಟದಲ್ಲಿ, ವಿಚಾರವಾದಿಗಳಾದ ದಾಬೋಲ್ಕರ್, ಪನ್ಸಾರೆ ಹಾಗೂ ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ತನಿಖೆ ಪೂರ್ತಿಯಾಗುವ ಮೊದಲೇ ಹಿಂದೂ ಸಂಘಟನೆಗಳ ಮೇಲೆ ಆರೋಪ ಹೊರಿಸಲಾಯಿತು. ಹತ್ಯೆಯಾದ ಕೂಡಲೇ ಈ ರೀತಿಯಲ್ಲಿ ಆರೋಪ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಿಸಿದರು.

ಮರೆಯಾಗಿರೋ ನಕ್ಸಲರನ್ನು ಹಾಗೂ ಕನ್ನಯ್ಯ ಕುಮಾರ್ ಸೇರಿದಂತೆ ಎಲ್ಲರನ್ನೂ ವಿಚಾರಣೆ ನಡೆಸಬೇಕು. ಆದರೆ, ಎಸ್‌ಐಟಿ ತಂಡ ಬಲಪಂಥೀಯರನ್ನು ಮಾತ್ರ ವಿಚಾರಣೆ ನಡೆಸುತ್ತಿದೆ ಎಂದ ಅವರು, ಗೌರಿ ಲಂಕೇಶ್ ಮತ್ತು ಪನ್ಸಾರೆ ಕುಟುಂಬಗಳ ಜತೆಗಿರುವ ನಂಟು ಹಾಗೂ ಎರಡೂ ಕುಟುಂಬಗಳ ನಡುವಿನ ಹಣಕಾಸಿನ ವ್ಯವಹಾರವನ್ನು ಸಹ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ದಾಭೋಲ್ಕರ್ ಹಾಗೂ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಅವರ ಕುಟುಂಬದವರ ಒತ್ತಡಕ್ಕೆ ಮಣಿದು ಅವೈಜ್ಞಾನಿಕ ಪದ್ಧತಿಯಲ್ಲಿ ಹಾಗೂ ತಪ್ಪು ದಿಕ್ಕಿನಲ್ಲಿ ತನಿಖೆ ನಡೆಸಲಾಗುತ್ತಿದೆ. ಇದರ ಪರಿಣಾಮ ತನಿಖೆ ನೆನೆಗುದಿಗೆ ಬಿದ್ದಿದೆ. ಅದೇ ರೀತಿಯಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ದಿಕ್ಕು ತಪ್ಪಿಸುವ ಸಲುವಾಗಿ ಅನಗತ್ಯ ಆರೋಪ ಹೊರಿಸಲಾಗುತ್ತಿದೆ. ಹೀಗಾಗಿ, ಈ ಪ್ರಕರಣದಲ್ಲಿ ನಕ್ಸಲರು, ಕೌಟುಂಬಿಕ ಕಲಹ, ಆಸ್ತಿ, ಸ್ಥಳೀಯ ಜಗಳ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಬೇಕು. ಈ ತನಿಖೆಗೆ ಸನಾತನ ಸಂಸ್ಥೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News