ಸೆ.23 ರಂದು ರಾಜಭವನ ಮುತ್ತಿಗೆ: ವಾಟಾಳ್ ನಾಗರಾಜ್

Update: 2017-09-21 16:32 GMT

ಬೆಂಗಳೂರು, ಸೆ.21: ಕಳಸಾ ಬಂಡೂರಿ ಹಾಗೂ ಮಹಾದಾಯಿ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಸೆ.23 ರಂದು ಬೆಂಗಳೂರಿನ ರಾಜಭವನಕ್ಕೆ ಮುತ್ತಿಗೆ ಹಾಕಲಾಗುತ್ತಿದೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾ-ಬಂಡೂರಿ ಯೋಜನೆ ಜಾರಿಗೆ ತರಲು ರಾಜ್ಯದ ಲೋಕಸಭಾ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹಾಕದೆ, ಗೋವಾ ಮತ್ತು ಮಹಾರಾಷ್ಟ್ರಕ್ಕೆ ನಿಯೋಗ ಕರೆದೊಯ್ಯುವ ನಾಟಕವಾಡುತ್ತಿದ್ದಾರೆ. ಈ ರೀತಿ ನಿಯೋಗ ಕರೆದೊಯ್ಯುವುದರಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶ ಮಾಡಿದಾಗ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. ಹೀಗಾಗಿ, ರಾಜ್ಯದ ಲೋಕಸಭಾ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರಕಾರದ ಗಮನ ಸೆಳೆಯಲು ಸೆ.22 ರಂದು ಗೋವಾ ಮುತ್ತಿಗೆ ಹಾಕಲು ತಿರ್ಮಾನಿಸಲಾಗಿತ್ತು. ಆದರೆ, ಅಲ್ಲಿ ಸತತವಾಗಿ ಮಳೆಯಾಗುತ್ತಿದ್ದರಿಂದ ಗೋವಾ ಮುತ್ತಿಗೆ ಕೈಬಿಟ್ಟು,23ರಂದು ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು. ನಂತರ ಹಂತ ಹಂತವಾಗಿ ರಾಜ್ಯದಲ್ಲಿ ಚಳುವಳಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ವಿಶೇಷ ಅಧಿವೇಶನ ನಡೆಸಿ: ರಾಜ್ಯ ಸರಕಾರ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಹೀಗಾಗಿ, ಇಂದಿಗೂ ಈ ಭಾಗ ಸಂಪೂರ್ಣವಾಗಿ ಹಿಂದುಳಿದಿದೆ ಎಂದ ಅವರು, ಉತ್ತರ ಕರ್ನಾಟಕದಲ್ಲಿ ಮಳೆಯಾಗದೇ ರೈತರು ತುಂಬಾ ಕಷ್ಟದಲ್ಲಿದ್ದಾರೆ. ಆದುದರಿಂದ ಈ ಭಾಗದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲು ಮತ್ತು ರೈತರಿಗೆ ಸೂಕ್ತ ಪರಿಹಾರ ನೀಡಲು ಕೂಡಲೇ ವಿಶೇಷ ಅಧಿವೇಶನ ಕರೆಯಬೇಕು. ಈ ಅಧಿವೇಶನದಲ್ಲಿ ಸಮಗ್ರ ಉತ್ತರ ಕರ್ನಾಟಕದ ಯೋಜನೆಗಳ ಖರ್ಚು ವೆಚ್ಚಗಳ ಕುರಿತು ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ ಕುಮಾರ ಶೆಟ್ಟಿ, ಗಿರೀಶ್‌ಗೌಡ, ಮಂಜುನಾಥ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News